ಭಾರತ ಹಾಗೂ ನ್ಯೂಜಿಲೆಂಡ್ ಮಧ್ಯೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯ ಈಗಾಗಲೇ ಆರಂಭವಾಗಿದೆ. ಆದರೆ, ಫಾರ್ಮ್ ಕಳೆದುಕೊಂಡಿರುವ ಕೆ.ಎಲ್. ರಾಹುಲ್ ಗೆ ಅವಕಾಶ ಇಲ್ಲದಂತಾಗಿದೆ.
ಭಾರತ ತಂಡದ ಖಾಯಂ ಸದಸ್ಯರಾಗಿದ್ದ ರಾಹುಲ್ ಪಾಲಿಗೆ ಈಗ ಅವರ ಫಾರ್ಮ್ ಮುಳುವಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿಯೇ ಇದೀಗ ರಾಹುಲ್ ಅವರನ್ನು ಕೈ ಬಿಟ್ಟು ಸರ್ಫರಾಝ್ ಖಾನ್ ಗೆ ಆಡುವ ಬಳಗದಲ್ಲಿ ಸ್ಥಾನ ನೀಡಲಾಗಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಎರಡು ಇನಿಂಗ್ಸ್ಗಳಿಂದ ಕಲೆಹಾಕಿದ್ದು ಕೇವಲ 12 ರನ್. ಮೊದಲ ಇನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟ್ ಆಗಿದ್ದರೆ, ಎರಡನೇ ಇನಿಂಗ್ಸ್ನಲ್ಲಿ 12 ರನ್ ಗಳಿಸಿ ನಿರಾಸೆ ಮೂಡಿಸಿದ್ದರು.. ಹೀಗಾಗಿ ಅವರ ವಿರುದ್ಧ ಅಪಸ್ವರಗಳು ಕೇಳಿ ಬಂದಿದ್ದವು. ಹೀಗಾಗಿ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿರುವ ಕನ್ನಡಿಗನನ್ನು ಆಡುವ ಬಳಗದಿಂದ ಕೈ ಬಿಡಲು ಭಾರತ ತಂಡ ನಿರ್ಧರಿಸಿದೆ. ಇದಕ್ಕೂ ಮುನ್ನ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಕೊನೆಯ ಟೆಸ್ಟ್ ಪಂದ್ಯದಲ್ಲಿ 43 ಎಸೆತಗಳಲ್ಲಿ 68 ರನ್ ಗಳಿಸಿದ್ದರು.
ಅತ್ತ ಶುಭ್ಮನ್ ಗಿಲ್ ಅವರ ಅನುಪಸ್ಥಿತಿಯಲ್ಲಿ ತಂಡದಲ್ಲಿ ಅವಕಾಶ ಪಡೆದಿದ್ದ ಸರ್ಫರಾಝ್ ಖಾನ್ ಮೊದಲ ಟೆಸ್ಟ್ ಪಂದ್ಯದಲ್ಲಿ 150 ರನ್ಗಳ ಭರ್ಜರಿ ಶತಕ ಸಿಡಿಸಿದ್ದರು. ಈ ಮೂಲಕ 2ನೇ ಪಂದ್ಯದಲ್ಲೂ ಚಾನ್ಸ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶುಭ್ಮನ್ ಗಿಲ್ ಕೂಡ 2ನೇ ಟೆಸ್ಟ್ ಪಂದ್ಯದಲ್ಲಿ ಮಿಂಚಿದರೆ ಕೆಎಲ್ ರಾಹುಲ್ ಮುಂಬರುವ ಮ್ಯಾಚ್ಗಳಲ್ಲೂ ಬೆಂಚ್ ಕಾಯಬೇಕಾಗಿ ಬರಬಹುದು. ಇದರಿಂದಾಗಿ ರಾಹುಲ್ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ.