ಇಂದೋರ್: ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಏಕದಿನ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ವೇಗಿ, ಕನ್ನಡಿಗ ಪ್ರಸಿದ್ಧ್ ಕೃಷ್ಣ ವಿರುದ್ಧ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅನಗತ್ಯವಾಗಿ ವಾಗ್ದಾಳಿ ನಡೆಸಿದ್ದಾರೆ. ಪ್ರಸಿದ್ಧ್ ಅವರನ್ನು “ರನ್ ಮಷೀನ್” ಎಂಬಂತೆ ಬಿಂಬಿಸಿ ಕೈಫ್ ನೀಡಿರುವ ಹೇಳಿಕೆ ಇದೀಗ ಕನ್ನಡಿಗ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ತಂಡದ ಮ್ಯಾನೇಜ್‌ಮೆಂಟ್ ಪ್ರಸಿದ್ಧ್ ಅವರ ಪ್ರತಿಭೆಯನ್ನು ನಂಬಿ ಅವಕಾಶ ನೀಡುತ್ತಿದ್ದರೆ, ಕೈಫ್ ಮಾತ್ರ ಅವರ ಬೌಲಿಂಗ್ ಸಾಮರ್ಥ್ಯದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಕೈಫ್, ಅರ್ಶದೀಪ್ ಸಿಂಗ್ ಅವರಿಗೆ ಅವಕಾಶ ನೀಡದೆ ಪ್ರಸಿದ್ಧ್ ಕೃಷ್ಣ ಅವರನ್ನು ಪದೇ ಪದೇ ಬೆಳೆಸುತ್ತಿರುವುದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ. “ಪ್ರಸಿದ್ಧ್ ಕೃಷ್ಣ ಒಂದೆರಡು ಪಂದ್ಯ ಬಿಟ್ಟರೆ ಉಳಿದೆಲ್ಲಾ ಪಂದ್ಯಗಳಲ್ಲಿ ರನ್ ಬಿಟ್ಟುಕೊಡುತ್ತಲೇ ಇರುತ್ತಾರೆ” ಎಂದು ಹೇಳುವ ಮೂಲಕ ಕನ್ನಡಿಗ ವೇಗಿಯ ಬೌಲಿಂಗ್ ಪ್ರದರ್ಶನವನ್ನು ಅಪಹಾಸ್ಯ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಕಳೆದ ಪಂದ್ಯದಲ್ಲಿ ಭಾರತದ ಸೋಲಿಗೆ ಬೌಲಿಂಗ್ ವೈಫಲ್ಯವೇ ಕಾರಣ ಎನ್ನುವ ಮೂಲಕ ಪರೋಕ್ಷವಾಗಿ ಪ್ರಸಿದ್ಧ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ.
ಪ್ರಮುಖ ವಿಕೆಟ್ ಟೇಕರ್
ವಾಸ್ತವವಾಗಿ, ಪ್ರಸಿದ್ಧ್ ಕೃಷ್ಣ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಪ್ರಮುಖ ವಿಕೆಟ್ ಟೇಕರ್ ಆಗಿ ಹೊರಹೊಮ್ಮುತ್ತಿದ್ದಾರೆ. ಕೇವಲ 23 ಪಂದ್ಯಗಳಲ್ಲಿ 40 ವಿಕೆಟ್ ಪಡೆದಿರುವ ಅವರ ಅಂಕಿಅಂಶಗಳನ್ನು ಗಮನಿಸದ ಕೈಫ್, ಕೇವಲ ಎಕಾನಮಿ ರೇಟ್ ಮುಂದಿಟ್ಟುಕೊಂಡು ಅವರನ್ನು ಟೀಕಿಸಿರುವುದು ಸರಿಯಲ್ಲ ಎಂಬುದು ಕನ್ನಡಿಗ ಅಭಿಮಾನಿಗಳ ವಾದವಾಗಿದೆ. “ಇಬ್ಬನಿ ಇರುವಾಗ ಬೌಲಿಂಗ್ ಮಾಡುವುದು ಸುಲಭವಲ್ಲ, ಇಂತಹ ಕಠಿಣ ಪರಿಸ್ಥಿತಿಯಲ್ಲೂ ಹೋರಾಡುತ್ತಿರುವ ಒಬ್ಬ ಯುವ ವೇಗಿಯನ್ನು ಹುರಿದುಂಬಿಸುವ ಬದಲು, ಸಾರ್ವಜನಿಕವಾಗಿ ಅವರ ವಿಶ್ವಾಸ ಕುಗ್ಗಿಸುವಂತೆ ಮಾತನಾಡುವುದು ಮಾಜಿ ಕ್ರಿಕೆಟಿಗನಿಗೆ ಶೋಭಿಸುವುದಿಲ್ಲ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇಂದೋರ್‌ನಲ್ಲಿ ನಡೆಯಲಿರುವ ಸರಣಿ ನಿರ್ಣಾಯಕ ಪಂದ್ಯಕ್ಕೆ ತಂಡದ ಆಯ್ಕೆಯ ಮೇಲೆ ಕೈಫ್ ಅವರ ಈ ಹೇಳಿಕೆ ಪ್ರಭಾವ ಬೀರಲಿದೆಯೇ ಎಂಬ ಚರ್ಚೆ ಶುರುವಾಗಿದೆ. ಆದರೆ, ಕನ್ನಡಿಗ ಪ್ರಸಿದ್ಧ್ ಕೃಷ್ಣ ಅಂತಿಮ ಪಂದ್ಯದಲ್ಲಿ ಮಾರಕ ಬೌಲಿಂಗ್ ಮಾಡುವ ಮೂಲಕ ಕೈಫ್ ಅವರ ಟೀಕೆಗಳಿಗೆ ಮೈದಾನದಲ್ಲೇ ಉತ್ತರ ನೀಡಲಿ ಎಂಬುದು ಅಭಿಮಾನಿಗಳ ಹಾರೈಕೆಯಾಗಿದೆ.
ಇದನ್ನೂ ಓದಿ: ಬಾಂಗ್ಲಾ ನಾಯಕನಿಗೆ ಹಸ್ತಲಾಘವ ನಿರಾಕರಿಸಿದ ಆಯುಷ್ ಮ್ಹಾತ್ರೆ | ರತ-ಬಾಂಗ್ಲಾ ರಾಜತಾಂತ್ರಿಕ ಸಂಘರ್ಷ!



















