ಮುಂಬೈ: ಬಾಲಿವುಡ್‌ನ ‘ಕ್ವೀನ್’ ಎಂದೇ ಖ್ಯಾತಿ ಪಡೆದಿರುವ ಹಿಮಾಚಲಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ ಕಂಗನಾ ರಣಾವತ್ ಅವರು ಮತ್ತೆ ಬಣ್ಣ ಹಚ್ಚಿದ್ದಾರೆ. ರಾಜಕೀಯ ಜವಾಬ್ದಾರಿಗಳ ನಡುವೆಯೇ ತಮ್ಮ ಹೊಸ ಚಿತ್ರ ‘ಭಾರತ್ ಭಾಗ್ಯ ವಿಧಾತಾ’ ಚಿತ್ರದ ಚಿತ್ರೀಕರಣದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.
ಸೋಮವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಕಂಗನಾ, “ಚಿತ್ರದ ಸೆಟ್‌ಗೆ ಮರಳಿರುವುದು ಸಂತೋಷ ತಂದಿದೆ” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ನಿರ್ದೇಶಕ ಮನೋಜ್ ತಪಾಡಿಯಾ ಅವರೊಂದಿಗೆ ಸ್ಕ್ರಿಪ್ಟ್ ಬಗ್ಗೆ ಚರ್ಚಿಸುತ್ತಿರುವುದು ಕಂಡುಬಂದಿದೆ. ತಿಳಿ ಬಣ್ಣದ ಸುಂದರ ಉಡುಪಿನಲ್ಲಿ ಮಿಂಚುತ್ತಿರುವ ಕಂಗನಾ, ಕೆಲಸದಲ್ಲಿ ಸಂಪೂರ್ಣವಾಗಿ ಮಗ್ನರಾಗಿರುವುದು ಕಂಡುಬರುತ್ತದೆ.

ಈ ಚಿತ್ರವು ಸಾಮಾನ್ಯ ಜನರ ಅಸಾಮಾನ್ಯ ಸಾಧನೆಗಳ ಕಥೆಯನ್ನು ಹೇಳಲಿದೆ. ಕಂಗನಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕಂಗನಾ ಅವರ ಹಿಂದಿನ ಸಿನಿಮಾ ‘ಎಮರ್ಜೆನ್ಸಿ’ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ಅವರ ನಟನೆ ಮೆಚ್ಚುಗೆಗೆ ಪಾತ್ರವಾಗಿತ್ತು.
ಹಾಲಿವುಡ್‌ಗೆ ಪಾದಾರ್ಪಣೆ:
ಕಂಗನಾ ರಣಾವತ್ ಅವರು ಸದ್ಯದಲ್ಲೇ ಹಾಲಿವುಡ್‌ಗೂ ಕಾಲಿಡುತ್ತಿರುವುದು ವಿಶೇಷ. ‘ಬ್ಲೆಸ್ಡ್ ಬಿ ದ ಇವಿಲ್’ (Blessed Be the Evil) ಎಂಬ ಹಾರರ್ ಡ್ರಾಮಾ ಮೂಲಕ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದ್ದಾರೆ. ಇದರಲ್ಲಿ ಟೈಲರ್ ಪೋಸಿ ಮತ್ತು ಸ್ಕಾರ್ಲೆಟ್ ರೋಸ್ ಸ್ಟಾಲೋನ್ (ಸಿಲ್ವೆಸ್ಟರ್ ಸ್ಟಾಲೋನ್ ಪುತ್ರಿ) ಅವರೊಂದಿಗೆ ಕಂಗನಾ ನಟಿಸಲಿದ್ದಾರೆ. ಈ ಚಿತ್ರವನ್ನು ಅನುರಾಗ್ ರುದ್ರ ನಿರ್ದೇಶಿಸುತ್ತಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು



















