ನವ ದೆಹಲಿ/ತಮಿಳುನಾಡು : ಮಕ್ಕಳ್ ನಿಧಿ ಮಯ್ಯಮ್ (MNM) ಮುಖ್ಯಸ್ಥ ಕಮಲ್ ಹಾಸನ್ ಇಂದು(ಶುಕ್ರವಾರ) ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಂಸತ್ತಿಗೆ ಕಾಲಿಟ್ಟಿದ್ದಾರೆ.
ಮುಂಜಾನೆ ಸಂಸತ್ ಸಂಕೀರ್ಣಕ್ಕೆ ಆಗಮಿಸಿದ ಅವರಿಗೆ ರಾಜ್ಯ ಸಭೆಯ ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಪ್ರಮಾಣ ವಚನ ಬೋಧಿಸಿದ್ದಾರೆ. ಕಮಲ್ ಹಾಸನ್ ತಮಿಳಿನಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
2024ರ ಲೋಕಸಭಾ ಚುನಾವಣೆಗೂ ಮುನ್ನಾ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನಿಧಿ ಮಯ್ಯಮ್ ಪಕ್ಷ ಡಿಎಂಕೆ ನೇತೃತ್ವದ ಬಣಕ್ಕೆ ಸೇರ್ಪಡೆಗೊಂಡ ಬಳಿಕ, ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸುವ ಅಥವಾ ರಾಜ್ಯಸಭಾ ನಾಮನಿರ್ದೇಶನ ಸ್ವೀಕರಿಸುವ ಆಯ್ಕೆಯನ್ನು ನೀಡಲಾಗಿತ್ತು. ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಅವರ ನೇತೃತ್ವದ ಪಕ್ಷ ಡಿಎಂಕೆ – ಕಾಂಗ್ರೆಸ್ ಮೈತ್ರಿಕೂಟಕ್ಕೆ ಸಂಪೂರ್ಣ ಬೆಂಬಲ ನೀಡಿತ್ತು.