ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹ ಭೀತಿ ಮುಂದುವರೆದಿದ್ದು, ಗ್ರಾಮಗಳಿಗೆ ನದಿ ನೀರು ನುಗ್ಗಿ ಆವಾಂತರ ಸೃಷ್ಟಿಸಿದೆ.
ಗ್ರಾಮದ ಲಕ್ಷ್ಮೀ ದೇವಸ್ಥಾನ, ಶಂಕರಲಿಂಗೇಶ್ವರ, ಹನುಮಾನ್ ಹಾಗೂ ಅಂಬಿಗರ ಚೌಡಯ್ಯ ದೇವಸ್ಥಾನ ಜಲ ಆವೃತ್ತವಾಗಿದ್ದು, ಭೀಮಾ ನದಿ ತಟದಲ್ಲಿರುವ 90 ಕ್ಕೂ ಅಧಿಕ ಗ್ರಾಮಸ್ಥರು ನೆರೆ ಹೊಡೆತದ ಆತಂಕದಲ್ಲಿದ್ದಾರೆ. ಮೂರು ಮನೆಗಳು ಹಾಗೂ ಕುರಿಗಾಹಿಗಳ ಶೆಡ್ ಗಳು ಮುಳುಗಡೆಯಾಗಿವೆ.
ಗ್ರಾಮದಲ್ಲಿ ಎರಡೂ ಅಡಿಗೂ ಅಧಿಕ ಭೀಮಾ ನದಿಯ ನೆರೆ ನೀರು ತುಂಬಿಕೊಂಡಿದ್ದು, ರಕ್ಕಸ ಪ್ರವಾಹದ ಆತಂಕದಲ್ಲಿಯೇ ಗ್ರಾಮಸ್ಥರು ದಿನ ಕಳೆಯುವಂತಾಗಿದೆ..
ಮತ್ತೊಂದೆಡೆ, ಮಹಾರಾಷ್ಟ್ರದ ಉಜನಿ, ಹಾಗೂ ಸೀನಾ ಜಲಾಶಯದಿಂದ 3 ಲಕ್ಷ ಕ್ಯೂಸೆಕ್ಸಗೂ ಹೆಚ್ಚು ನೀರು ಭೀಮಾ ನದಿಗೆ ಬರುತಿರುವುದರಿಂದ ಅಫಜಲಪುರ ತಾಲೂಕಿನ ಸೊನ್ನ ಡ್ಯಾಂ ತುಂಬಿ ತುಳುಕುತ್ತಿದೆ.
ಸೊನ್ನ ಡ್ಯಾಮ್ ನಿಂದ 3 ಲಕ್ಷ 20 ಸಾವಿರ ಕ್ಯೂಸೆಕ್ಸ್ ನೀರು ಹೊರಕ್ಕೆ ಬರುತ್ತಿರುವ ಪರಿಣಾಮ ಅಫಜಲಪುರ, ಕಲಬುರಗಿ, ಜೇವರ್ಗಿ, ಚಿತ್ತಾಪೂರ ತಾಲೂಕಿನ ಭೀಮಾ ನದಿ ತೀರದ 150 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರವಾಹ ಭೀತಿ ತಲೆದೂರಿದೆ.
ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದಲ್ಲಿನ ಉತ್ತರಾದಿ ಮಠದ ಶ್ರೀ ವೇದೇಶತೀರ್ಥ ವಿದ್ಯಾಪೀಠದೊಳಗೆ ನದಿ ನೀರು ನುಗ್ಗಿದ್ದು ಹಾಗೂ ಮಣ್ಣೂರ ಗ್ರಾಮದಲ್ಲಿನ ಕೆಲವು ಮನೆಗಳವರೆಗೆ ನದಿ ನೀರು ಬಂದಿದೆ. ಹಾಗಾಗಿ, ಮುಂಜಾಗ್ರತಾ ಕ್ರಮವಾಗಿ 7 ಮನೆಗಳಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ.
ಗಾಣಗಾಪೂರ ಮತ್ತು ಘತ್ತರಗಿ ಗ್ರಾಮದ ಹೊರವಲಯದ ಸೇತುವೆಗಳ ಮೇಲೆ ನೀರು ದುಮ್ಮುಕ್ಕುತ್ತಿರುವುದರಿಂದ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಪ್ರವಾಹ ಪರಿಸ್ಥಿತಿ ಎದುರಿಸಲು ಕಲಬುರಗಿ ಜಿಲ್ಲಾಡಳಿತ ಸರ್ವ ಸನ್ನದ್ದವಾಗಿದ್ದು, ನದಿ ತೀರಕ್ಕೆ ಜನ ಜಾನುವಾರುಗಳು ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.