ದಾವಣಗೆರೆ : ಕಾಂಗ್ರೆಸ್ ನಾಯಕರು ನಮ್ಮನ್ನ ಕಡೆಗಣಿಸಿದ್ದಾರೆ. ಅವರಿಗೆ ಅಹಿಂದಾ ಸಮಾಜದ ಶಕ್ತಿ ಏನು ಅಂತ ತೋರಿಸಬೇಕು. ನಾನು ನಿಮ್ಮ ಮನೆಯ ಒಬ್ಬ ಅಣ್ಣ, ತಮ್ಮ ಅಂತ ತಿಳಿದು ಬೆಂಬಲಿಸಬೇಕು ಎಂದು ಶಾಮನೂರು ಆಪ್ತ ಸಾಧಿಕ್ ಪೈಲ್ವಾನ್ ಸವಾಲ್ ಹಾಕಿದ್ದಾರೆ.
ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸಾಧಿಕ್ ಪೈಲ್ವಾನ್ ಕಣಕ್ಕಿಳಿದ ಹಿನ್ನಲೆ, ಸಾಧಿಕ್ ಪೈಲ್ವಾನ್ ರಾಜಿಯಾಗಿದ್ದಾರೆ ಅನ್ನೋ ಚರ್ಚೆ ಜೋರಾಗಿ ಕೇಳಿಬರುತ್ತಿದ್ದು, ಇದಕ್ಕೆ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ ಅವರು, ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಲ್ಲ ಎಂದು ಕಾಂಗ್ರೆಸ್‍ಗೆ ಸವಾಲು ಎಸೆದಿದ್ದಾರೆ. ಅಹಿಂದ ಸಮುದಾಯದ ಬೆಂಬಲದಿಂದ ಈ ಬಾರಿ ಚುನಾವಣೆ ಕಣದಲ್ಲಿ ಇದ್ದೇನೆ. ಅಹಿಂದ ಸಮುದಾಯ ಬಿಟ್ಟು ನಾನಿಲ್ಲ. ಅವರ ಆಶೀರ್ವಾದ ನನ್ನ ಮೇಲೆ ಇದೆ ಎಂದಿದ್ದಾರೆ.
ಕಾಂಗ್ರೆಸ್ ಮುಖಂಡರು ನಮ್ಮ ಅಹಿಂದ ಸಮುದಾಯಕ್ಕೆ ಟಿಕೆಟ್ ನೀಡದೇ ಅನ್ಯಾಯ ಮಾಡಿದ್ದಾರೆ ಎಂದು ಇದೇ ವೇಳೆ ಆಕ್ರೋಶ ಹೊರಹಾಕಿದ್ದಾರೆ. ಸಮರ್ಥ್ ಶಾಮನೂರು ಟಿಕೆಟ್ ನೀಡಿದ್ದಕ್ಕೆ ಕಾಂಗ್ರೆಸ್ ವಿರುದ್ದ ಅಲ್ಪಸಂಖ್ಯಾತ ನಾಯಕರು ಸಮರ ಸಾರಿದ್ದಾರೆ. 23 ಮಂದಿ ಮುಸ್ಲಿಮ್ ನಾಯಕರು ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ.


















