ನವದೆಹಲಿ: ವಿವಿಧ ಶಾಲೆ-ಕಾಲೇಜುಗಳ ಬಳಿಕ ಇದೀಗ ದೆಹಲಿ ಹೈಕೋರ್ಟ್‌ಗೆ ಶುಕ್ರವಾರ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ ನ್ಯಾಯಾಲಯದ ಆವರಣವನ್ನು ಖಾಲಿ ಮಾಡಿಸಲಾಗಿದೆ. ನ್ಯಾಯಾಧೀಶರ ಕೊಠಡಿ ಸೇರಿದಂತೆ ಹಲವು ಸ್ಥಳಗಳಲ್ಲಿ ಸ್ಫೋಟಕಗಳನ್ನು ಇಡಲಾಗಿದೆ ಎಂದು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ಬೆದರಿಕೆ ಇ ಮೇಲ್‌ನಲ್ಲೇನಿತ್ತು?
ಶುಕ್ರವಾರ ಬೆಳಗ್ಗೆ ಬಂದ ಇ-ಮೇಲ್‌ನಲ್ಲಿ, ನ್ಯಾಯಾಲಯದ ಆವರಣದಲ್ಲಿ ಮೂರು ಸ್ಫೋಟಕಗಳನ್ನು ಇರಿಸಲಾಗಿದೆ. ಮಧ್ಯಾಹ್ನ 2 ಗಂಟೆಯೊಳಗೆ ಆವರಣವನ್ನು ಸಂಪೂರ್ಣವಾಗಿ ಖಾಲಿ ಮಾಡಬೇಕು ಎಂದು ಎಚ್ಚರಿಕೆ ನೀಡಲಾಗಿತ್ತು. “ಮಧ್ಯಾಹ್ನದ ಇಸ್ಲಾಮಿಕ್ ಪ್ರಾರ್ಥನೆಯ ನಂತರ ನ್ಯಾಯಾಧೀಶರ ಕೊಠಡಿ ಸ್ಫೋಟಗೊಳ್ಳಲಿದೆ” ಎಂದೂ ಪತ್ರದಲ್ಲಿ ಬರೆಯಲಾಗಿತ್ತು. ಅಲ್ಲದೆ, ಈ ಕೃತ್ಯಕ್ಕೆ “ಪಾಕಿಸ್ತಾನದ ಐಎಸ್‌ಐ ಘಟಕದ ಸಂಪೂರ್ಣ ಬೆಂಬಲವಿದೆ” ಎಂದು ಉಲ್ಲೇಖಿಸಲಾಗಿತ್ತು.
ತಕ್ಷಣದ ಕಾರ್ಯಾಚರಣೆ
ಬೆದರಿಕೆ ಕರೆ ಬಂದ ತಕ್ಷಣ ದೆಹಲಿ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಕ್ಕೆ ಧಾವಿಸಿ, ಶೋಧ ಕಾರ್ಯಾಚರಣೆ ಆರಂಭಿಸಿವೆ. ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಾಲಯದ ಆವರಣವನ್ನು ಸಂಪೂರ್ಣವಾಗಿ ಖಾಲಿ ಮಾಡಿಸಲಾಗಿದ್ದು, ನ್ಯಾಯಾಧೀಶರು, ವಕೀಲರು ಮತ್ತು ಸಿಬ್ಬಂದಿಯನ್ನು ಹೊರಗೆ ಕಳುಹಿಸಲಾಗಿದೆ. ಸದ್ಯಕ್ಕೆ ಶೋಧ ಕಾರ್ಯ ಮುಂದುವರೆದಿದ್ದು, ದೆಹಲಿ ಪೊಲೀಸರಿಂದ ಅಧಿಕೃತ ಹೇಳಿಕೆ ಇನ್ನಷ್ಟೇ ಬರಬೇಕಿದೆ.
ಇತ್ತೀಚಿನ ಹುಸಿ ಬಾಂಬ್ ಬೆದರಿಕೆಗಳು
ದೆಹಲಿಯಲ್ಲಿ ಇತ್ತೀಚೆಗೆ ಇಂತಹ ಹುಸಿ ಬಾಂಬ್ ಬೆದರಿಕೆಗಳು ಹೆಚ್ಚಾಗುತ್ತಿವೆ. ಕಳೆದ ಮಂಗಳವಾರವಷ್ಟೇ ದೆಹಲಿ ಮುಖ್ಯಮಂತ್ರಿಗಳ ಸಚಿವಾಲಯ, ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು ಮತ್ತು ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ ಸಂಸ್ಥೆಗಳಿಗೂ ಬಾಂಬ್ ಬೆದರಿಕೆ ಇ-ಮೇಲ್‌ಗಳು ಬಂದಿದ್ದವು. ಈ ಮೂರೂ ಸ್ಥಳಗಳಲ್ಲಿ 1 ಕಿ.ಮೀ ವ್ಯಾಪ್ತಿಯಲ್ಲಿ ಸ್ಫೋಟಗೊಳ್ಳುವ ಸಾಮರ್ಥ್ಯದ ಆರ್‌ಡಿಎಕ್ಸ್ ಇಡಲಾಗಿದೆ ಎಂದು ಬೆದರಿಕೆ ಹಾಕಲಾಗಿತ್ತು. ಆದರೆ, ತಪಾಸಣೆಯ ನಂತರ ಇವೆಲ್ಲವೂ ಹುಸಿ ಬೆದರಿಕೆಗಳೆಂದು ದೃಢಪಟ್ಟಿತ್ತು. ಕಳೆದ ಕೆಲವು ತಿಂಗಳುಗಳಲ್ಲಿ ದೆಹಲಿಯ ಹಲವು ಶಾಲೆಗಳಿಗೂ ಇದೇ ರೀತಿ ಬೆದರಿಕೆ ಇ-ಮೇಲ್‌ಗಳು ಬಂದಿದ್ದವು. ಈ ಘಟನೆಗಳ ಹಿನ್ನೆಲೆಯಲ್ಲಿ ಭದ್ರತಾ ಏಜೆನ್ಸಿಗಳು ಹೆಚ್ಚಿನ ನಿಗಾ ವಹಿಸಿವೆ.



















