ಪಾಕಿಸ್ತಾನ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ನಲ್ಲಿ ಇಂಗ್ಲೆಂಡ್ ಆಟಗಾರ ಜೋ ರೂಟ್ (Joe Root) ಉತ್ತಮ ಬ್ಯಾಟಿಂಗ್ ಮಾಡಿದ್ದು, ದ್ವಿತಶತಕ ಸಿಡಿಸಿ ಮಿಂಚಿದ್ದಾರೆ. ಈ ವೇಳೆ ಅದ್ಭುತ ದಾಖಲೆ ಬರೆದಿದ್ದಾರೆ.
ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ರೂಟ್ 375 ಎಸೆತಗಳಲ್ಲಿ 17 ಫೋರ್ ಗಳೊಂದಿಗೆ 262 ರನ್ ಗಳಿಸಿ ದಾಖಲೆ ಬರೆದಿದ್ದಾರೆ. ಈ ಮೂಲಕ ದ್ವಿಶತಕದೊಂದಿಗೆ ರೂಟ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 20 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.
ಈ ಸಾಧನೆ ಮಾಡಿದ ಇಂಗ್ಲೆಂಡ್ನ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. ಅಲ್ಲದೇ, ಸದ್ಯ ಸಕ್ರಿಯ ಆಟಗಾರರ ಪಟ್ಟಿಯಲ್ಲಿ ಈ ದಾಖಲೆ ಮಾಡಿದ 2ನೇ ಆಟಗಾರ ಎಂಬ ದಾಖಲೆಯೂ ಇವರ ಹೆಸರಿಗೆ ಬಂದಿದೆ. ಪ್ರಸ್ತುತ ಆಡುತ್ತಿರುವ ಆಟಗಾರರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 20 ಸಾವಿರಕ್ಕೂ ಅಧಿಕ ರನ್ ಗಳಿಸಿದ ಬ್ಯಾಟರ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 595 ಇನಿಂಗ್ಸ್ ಆಡಿರುವ ಕಿಂಗ್ ಕೊಹ್ಲಿ 80 ಶತಕಗಳೊಂದಿಗೆ ಒಟ್ಟು 27,041 ರನ್ ಗಳಿಸಿದ್ದಾರೆ. ಈಗ ಈ ಸಾಲಿಗೆ ಜೋ ರೂಟ್ ಬಂದಿದ್ದಾರೆ.
2012 ರಿಂದ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುತ್ತಿರುವ ರೂಟ್ ಒಟ್ಟು 457 ಇನಿಂಗ್ಸ್ ಗಳಿಂದ 20 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 20 ಸಾವಿರ ರನ್ ಕಲೆಹಾಕಿದ ವಿಶ್ವದ ನಾಲ್ಕನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ವಿರಾಟ್ ಕೊಹ್ಲಿ (417 ಇನಿಂಗ್ಸ್) ಅಗ್ರಸ್ಥಾನದಲ್ಲಿದ್ದರೆ, ಸಚಿನ್ ತೆಂಡೂಲ್ಕರ್ (453 ಇನಿಂಗ್ಸ್) ಹಾಗೂ ಬ್ರಿಯಾನ್ ಲಾರಾ (453) ನಂತರದ ಸ್ಥಾನಗಳಲ್ಲಿದ್ದಾರೆ. 458 ಇನಿಂಗ್ಸ್ಗಳ ಮೂಲಕ 20 ಸಾವಿರ ರನ್ ಪೂರೈಸಿರುವ ಜೋ ರೂಟ್ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (564) ದಾಖಲೆ ಹಿಂದಿಕ್ಕಿದ್ದಾರೆ.
ದ್ವಿಶತಕದೊಂದಿಗೆ ಫ್ಯಾಬ್-4 ಆಟಗಾರರಲ್ಲಿ ಅತೀ ಹೆಚ್ಚು ಡಬಲ್ ಸೆಂಚುರಿ ಸಿಡಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅತ್ಯಧಿಕ ಡಬಲ್ ಸೆಂಚುರಿ ಸಿಡಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ಇಲ್ಲಿಯವರೆಗೆ 7 ದ್ವಿಶತಕ ಸಿಡಿಸಿದ್ದಾರೆ. ಜೋ ರೂಟ್ ಹಾಗೂ ಕೇನ್ ವಿಲಿಯಮ್ಸನ್ ತಲಾ 6 ಡಬಲ್ ಶತಕ ಗಳಿಸಿದ್ದಾರೆ.