ಬೆಂಗಳೂರು: ಇರುವ ಕಂಪನಿಯಲ್ಲಿ ಸಂಬಳ ಜಾಸ್ತಿಯಾಗದಿರುವುದು, ನಿರೀಕ್ಷಿತ ಮಟ್ಟದಲ್ಲಿ ವೃತ್ತಿ ಏಳಿಗೆ ಹೊಂದದಿರುವುದು, ಹೊಸ ಕಂಪನಿಯಲ್ಲಿ ಒಳ್ಳೆಯ ಅವಕಾಶ ಸೇರಿ ಹಲವು ಕಾರಣಗಳಿಂದಾಗಿ ಪದೇಪದೆ ಕಂಪನಿಗಳನ್ನು ಬದಲಿಸಬೇಕಾಗುತ್ತದೆ. ಹೀಗೆ, ಕಂಪನಿ ಬದಲಿಸಿದಾಗ ಪಿಎಫ್ ಖಾತೆಯಲ್ಲಿರುವ ಮೊತ್ತವನ್ನೂ ಹೊಸ ಕಂಪನಿಗೆ ವರ್ಗಾವಣೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ವರ್ಷಕ್ಕೆ ಶೇ.8.25ರಷ್ಟು ಬಡ್ಡಿಯ ಲಾಭ ಸಿಗುವುದಿಲ್ಲ.
ಹಾಗಾಗಿ, ಉದ್ಯೋಗಿಗಳು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಉದ್ಯೋಗ ಬದಲಿಸಿದಾಗ, ಕೂಡಲೇ ಪಿಎಫ್ ಮೊತ್ತವನ್ನು ಕೂಡ ವರ್ಗಾವಣೆ ಮಾಡಿಕೊಳ್ಳಬೇಕು. ಇಪಿಎಫ್ಒ ಸಂಸ್ಥೆಯು ಪಿಎಫ್ ಮೊತ್ತಕ್ಕೆ ವರ್ಷಕ್ಕೆ ಶೇ.8.25ರಷ್ಟು ಬಡ್ಡಿ ನೀಡುತ್ತದೆ. ಇದರ ಲಾಭ ಸಿಗಬೇಕು ಎಂದರೆ, ಉದ್ಯೋಗಿಗಳು ಕಂಪನಿ ಬದಲಿಸಿದ ಕೂಡಲೇ ಹಳೆಯ ಕಂಪನಿಯಲ್ಲಿ ಜಮೆಯಾದ ಪಿಎಫ್ ಮೊತ್ತವನ್ನು ಹೊಸ ಕಂಪನಿಯ ಖಾತೆಗೆ ವರ್ಗಾವಣೆ ಮಾಡಿಕೊಳ್ಳಬೇಕು.
ಯಾವುದೇ ಖಾಸಗಿ ಕಂಪನಿ ಉದ್ಯೋಗಿಯು ಬೇರೆ ಕಂಪನಿ ಸೇರಿದ ಬಳಿಕ ಯುಎಎನ್ ಸಂಖ್ಯೆಯು ಬದಲಾಗುವುದಿಲ್ಲ. ಅದೇ ಯುಎಎನ್ ಮುಂದುವರಿಯುತ್ತದೆ. ಆದರೆ, ಇಪಿಎಫ್ ಹೊಸ ಖಾತೆಯು ಹೊಸ ಕಂಪನಿಯಲ್ಲಿ ತೆರೆಯಲಾಗುತ್ತದೆ. ಹಾಗಾಗಿ, ಹಳೆಯ ಖಾತೆಯಲ್ಲಿಯ ಮೊತ್ತವು ಹಾಗೆಯೇ ಉಳಿದುಬಿಡುತ್ತದೆ. ಈ ಮೊತ್ತವನ್ನು ಈಗ ಸುಲಭವಾಗಿ ಆನ್ ಲೈನ್ ಮೂಲಕವೇ ವರ್ಗಾವಣೆ ಮಾಡಿಕೊಳ್ಳಬಹುದಾದ ಕಾರಣ ಉದ್ಯೋಗಿಗಳು ಎಚ್ಚರಿಕೆ ವಹಿಸಬೇಕು.
ಒಬ್ಬ ವ್ಯಕ್ತಿಯು ಒಂದು ಕಂಪನಿಯನ್ನು ತೊರೆದು, ಹೊಸ ಕಂಪನಿ ಸೇರಿದ ಬಳಿಕ ಹಳೆಯ ಕಂಪನಿಯ ಇಪಿಎಫ್ ಖಾತೆಯ ಮೊತ್ತಕ್ಕೆ ಗರಿಷ್ಠ 3 ವರ್ಷದವರೆಗೆ ಬಡ್ಡಿ ಜಮೆ ಮಾಡಲಾಗುತ್ತದೆ. ಒಂದು ಇಪಿಎಫ್ ಖಾತೆಗೆ ಸತತ ಮೂರು ವರ್ಷಗಳವರೆಗೆ ಯಾವುದೇ ಮೊತ್ತ ಜಮೆಯಾಗದಿದ್ದರೆ, ಮೂರು ವರ್ಷಗಳ ಬಳಿಕ ಬಡ್ಡಿಯನ್ನು ಜಮೆ ಮಾಡುವುದಿಲ್ಲ. ಹಾಗಾಗಿ, ಉದ್ಯೋಗಿಗಳು ಹಳೆ ಕಂಪನಿಯ ಇಪಿಎಫ್ ಮೊತ್ತವನ್ನು ವರ್ಗಾವಣೆ ಮಾಡುವುದು ಸೂಕ್ತ.