ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ಆಯ್ಕೆ ಸಮಿತಿಯ ಸಂವಹನ ಕೊರತೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ. ಮುಂಬರುವ 2026ರ ಐಸಿಸಿ ಟಿ20 ವಿಶ್ವಕಪ್ ತಂಡದಿಂದ ತಮ್ಮನ್ನು ಕೈಬಿಟ್ಟ ಬಗ್ಗೆ ಆಯ್ಕೆಗಾರರು ಯಾವುದೇ ಮುನ್ಸೂಚನೆ ನೀಡಿರಲಿಲ್ಲ ಎಂದು ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಸ್ಫೋಟಕ ಮಾಹಿತಿ ನೀಡಿದ್ದಾರೆ. ಅಧಿಕೃತವಾಗಿ ತಂಡದ ಪ್ರಕಟಣೆಯಾಗುವವರೆಗೂ ತಮಗೆ ಈ ವಿಷಯ ತಿಳಿದೇ ಇರಲಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ.
ಆಯ್ಕೆಗಾರರ ನಡೆಯ ಬಗ್ಗೆ ಜಿತೇಶ್ ಅಸಮಾಧಾನ
ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಜಿತೇಶ್ ಶರ್ಮಾ, “ತಂಡವನ್ನು ಘೋಷಿಸುವವರೆಗೂ ನನ್ನನ್ನು ಕೈಬಿಡಲಾಗುತ್ತಿದೆ ಎಂಬ ಸುಳಿವು ನನಗಿರಲಿಲ್ಲ. ತಂಡ ಪ್ರಕಟವಾದ ಮೇಲಷ್ಟೇ ಈ ವಿಷಯ ತಿಳಿಯಿತು. ನಂತರ ಪತ್ರಿಕಾಗೋಷ್ಠಿಯಲ್ಲಿ ಆಯ್ಕೆಗಾರರು ನೀಡಿದ ವಿವರಣೆ ನನಗೆ ಸಮಂಜಸ ಎನಿಸಿತು. ಆನಂತರ ಕೋಚ್‌ಗಳು ಮತ್ತು ಆಯ್ಕೆಗಾರರ ಜೊತೆ ಚರ್ಚೆ ನಡೆಸಿದಾಗ ಅವರ ಕಾರಣಗಳು ನ್ಯಾಯೋಚಿತವಾಗಿವೆ ಎಂದು ನನಗನ್ನಿಸಿತು. ಅವರು ನನಗೆ ಏನು ವಿವರಿಸಲು ಬಯಸಿದ್ದರೋ ಅದನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ,” ಎಂದು ಹೇಳುವ ಮೂಲಕ ಆಯ್ಕೆಗಾರರ ನಿರ್ಧಾರವನ್ನು ಒಪ್ಪಿಕೊಂಡರೂ, ಸಂವಹನದ ಕೊರತೆಯನ್ನು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.
ಆರ್‌ಸಿಬಿ ಚಾಂಪಿಯನ್ ಆಗುವಲ್ಲಿ ಜಿತೇಶ್ ಪಾತ್ರ
ಜಿತೇಶ್ ಶರ್ಮಾ ಕಳೆದ ಕೆಲವು ಸರಣಿಗಳಲ್ಲಿ ಭಾರತ ತಂಡದ ಪರ ಕಣಕ್ಕಿಳಿದಿದ್ದರು. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳಲ್ಲಿ ಅವರು ತಂಡದ ಭಾಗವಾಗಿದ್ದರು. ವಿಶೇಷವೆಂದರೆ, 2025ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಮರಳಿದ್ದ ಇವರು, ತಂಡವು ತನ್ನ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದರ ಜೊತೆಗೆ ‘ಇಂಡಿಯಾ ಎ’ ತಂಡವನ್ನು ಎಮರ್ಜಿಂಗ್ ಏಷ್ಯಾ ಕಪ್‌ನಲ್ಲಿ ಮುನ್ನಡೆಸಿದ ಅನುಭವವೂ ಇವರಿಗಿದೆ. ಆದರೆ, ಇತ್ತೀಚಿನ ವಿಜಯ್ ಹಜಾರೆ ಟ್ರೋಪಿಯಲ್ಲಿ ಬರೋಡಾ ಪರ ಆಡುತ್ತಿರುವ ಜಿತೇಶ್ ಫಾರ್ಮ್ ಕೊರತೆಯಿಂದ ಬಳಲುತ್ತಿದ್ದು, ಚಂಡೀಗಢ ವಿರುದ್ಧದ ಅರ್ಧಶತಕವನ್ನು ಹೊರತುಪಡಿಸಿ ಉಳಿದ ಪಂದ್ಯಗಳಲ್ಲಿ ಎರಡಂಕಿ ಮೊತ್ತ ದಾಖಲಿಸಲು ಪರದಾಡುತ್ತಿದ್ದಾರೆ.
ಐಪಿಎಲ್ ಸಾರ್ವಕಾಲಿಕ ಶ್ರೇಷ್ಠ ತಂಡದಿಂದ ಕೊಹ್ಲಿಗೆ ಕೊಕ್!
ಇದೇ ಸಂದರ್ಭದಲ್ಲಿ ಜಿತೇಶ್ ಶರ್ಮಾ ತಮ್ಮ ನೆಚ್ಚಿನ ‘ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ಇಲೆವೆನ್’ (All-time IPL XI) ತಂಡವನ್ನು ಆರಿಸಿದ್ದಾರೆ. ಅಚ್ಚರಿಯೆಂದರೆ ಈ ತಂಡದಲ್ಲಿ ಅವರು ರನ್ ಮಷೀನ್ ವಿರಾಟ್ ಕೊಹ್ಲಿಗೆ ಸ್ಥಾನ ನೀಡಿಲ್ಲ. ರೋಹಿತ್ ಶರ್ಮಾ ಮತ್ತು ಆಡಮ್ ಗಿಲ್ಕ್ರಿಸ್ಟ್ ಅವರನ್ನು ಆರಂಭಿಕರನ್ನಾಗಿ ಆರಿಸಿರುವ ಅವರು, ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಜಾಕ್ ಕಾಲಿಸ್ ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡಿದ್ದಾರೆ. ಎಂ.ಎಸ್. ಧೋನಿ ಅವರಿಗೆ ತಂಡದ ನಾಯಕತ್ವ ಮತ್ತು ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಜೋಶ್ ಹ್ಯಾಜಲ್ ವುಡ್ ಮತ್ತು ವರುಣ್ ಚಕ್ರವರ್ತಿ ಈ ತಂಡದ ಉಳಿದ ಸದಸ್ಯರಾಗಿದ್ದಾರೆ.
ಇದನ್ನೂ ಓದಿ : ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ “ನಾವುಂದ ಗ್ರಾಮೋತ್ಸವ”.. ಬೈಂದೂರು ಅಭಿವೃದ್ಧಿಗೆ MLA ಕನಸು ನೂರಾರು!



















