ನವದೆಹಲಿ: ಇತ್ತೀಚೆಗೆ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ, ಭಾರತೀಯ ಕ್ರಿಕೆಟಿಗ ಜಿತೇಶ್ ಶರ್ಮಾ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ವೈರಲ್ ವಿಡಿಯೋ ಕುರಿತು ಮಾಜಿ ಭಾರತ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಸ್ಪಷ್ಟನೆ ನೀಡಿದ್ದಾರೆ.
ಜಿತೇಶ್ ಶರ್ಮಾ ಅವರಿಗೆ ಲಾರ್ಡ್ಸ್‌ನ ಭದ್ರತಾ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ, “ಲಾರ್ಡ್ಸ್ ಭದ್ರತಾ ಸಿಬ್ಬಂದಿ ಜಿತೇಶ್ ಶರ್ಮಾ ಅವರನ್ನು ಸ್ಟೇಡಿಯಂಗೆ ಪ್ರವೇಶಿಸಲು ಬಿಡಲಿಲ್ಲ. ಇದು ತುಂಬಾ ಮುಜುಗರವಾಗಿದೆ” ಎಂದು ಶೀರ್ಷಿಕೆ ನೀಡಲಾಗಿತ್ತು.
ಆದರೆ, ಕಾಮೆಂಟೇಟರ್ ಆಗಿರುವ ದಿನೇಶ್ ಕಾರ್ತಿಕ್ ಈ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ್ದಾರೆ. ಈ ಘಟನೆ ನಡೆದಿದ್ದು ಮುಖ್ಯ ಸ್ಟೇಡಿಯಂ ಪ್ರವೇಶದ್ವಾರದಲ್ಲಿ ಅಲ್ಲ, ಬದಲಿಗೆ ಮಾಧ್ಯಮ ಕೇಂದ್ರದ ಹೊರಗೆ ಎಂದು ಅವರು ತಿಳಿಸಿದ್ದಾರೆ. ಸರಣಿಯ ಕಾಮೆಂಟರಿ ಪ್ಯಾನೆಲ್‌ನ ಭಾಗವಾಗಿರುವ ಕಾರ್ತಿಕ್, ಜಿತೇಶ್ ಅವರನ್ನು ಕಾಮೆಂಟರಿ ಬಾಕ್ಸ್‌ಗೆ ಆಹ್ವಾನಿಸಿದ್ದೆ.
ತಾವು ಕೆಳಗೆ ಬಂದು ಅವರನ್ನು ಭೇಟಿಯಾಗಿ ಒಟ್ಟಿಗೆ ಕಾಮೆಂಟರಿ ಬಾಕ್ಸ್‌ಗೆ ಕರೆದುಕೊಂಡು ಹೋದೆವು ಮತ್ತು ಅಲ್ಲಿ ಅವರು ಎಲ್ಲರನ್ನೂ ಭೇಟಿಯಾದರು ಎಂದು ಹೇಳಿದ್ದಾರೆ. “ಸೋಷಿಯಲ್ ಮೀಡಿಯಾದಲ್ಲಿ ಇಂತಹ ಕೆಲವು ಸಮಸ್ಯೆಗಳು ಬಹಳಷ್ಟು ಜನರಿಗೆ ಎದುರಾಗುತ್ತವೆ. ನಾನು ಜಿತೇಶ್‌ನನ್ನು ಕಾಮ್ ಬಾಕ್ಸ್‌ಗೆ ಆಹ್ವಾನಿಸಿದ್ದೆ, ಅವನು ಬಂದಿದ್ದ, ನಾನು ಕೆಳಗೆ ಬಂದು ಅವನನ್ನು ಭೇಟಿಯಾಗಿ ಕಾಮ್ ಬಾಕ್ಸ್‌ಗೆ ಕರೆದುಕೊಂಡು ಹೋದೆ ಮತ್ತು ಅವನು ಅಲ್ಲಿ ಎಲ್ಲರನ್ನೂ ಭೇಟಿಯಾದ. ಅಂದಹಾಗೆ, ಇದು ಮೀಡಿಯಾ ಸೆಂಟರ್‌ನ ಕೆಳಗಿದೆ, ಮೈದಾನದ ಪ್ರವೇಶದ್ವಾರವಲ್ಲ,” ಎಂದು ಕಾರ್ತಿಕ್ ಟ್ವೀಟ್ ಮಾಡಿದ್ದಾರೆ.
ಜಿತೇಶ್ ಶರ್ಮಾ ಇನ್ನೂ ಭಾರತಕ್ಕಾಗಿ ಟೆಸ್ಟ್ ಪದಾರ್ಪಣೆ ಮಾಡಿಲ್ಲ. ಆದರೆ, ಅವರು ಈಗಾಗಲೇ ಒಂಬತ್ತು T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದು, 14.28 ಸರಾಸರಿಯಲ್ಲಿ ಮತ್ತು 147.05 ರ ಸ್ಟ್ರೈಕ್ ರೇಟ್‌ನಲ್ಲಿ 100 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 35 ರನ್, ಇದನ್ನು ಅವರು 2023ರ ಡಿಸೆಂಬರ್‌ನಲ್ಲಿ ರಾಯ್‌ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗಳಿಸಿದ್ದರು.
ಲಾರ್ಡ್ಸ್‌ನಲ್ಲಿ ಭಾರತಕ್ಕೆ ಸೋಲು
ಲಾರ್ಡ್ಸ್ ಟೆಸ್ಟ್ ಪಂದ್ಯವು ಅಂತಿಮ ಹಂತದವರೆಗೂ ರೋಚಕವಾಗಿ ಸಾಗಿತು. ಆದರೆ, ಇಂಗ್ಲೆಂಡ್ 22 ರನ್‌ಗಳ ಅಂತರದಿಂದ ವಿಜಯ ಸಾಧಿಸಿತು. ಇದು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ರನ್‌ಗಳ ಅಂತರದಿಂದ ದಾಖಲಾದ ಅತ್ಯಂತ ಕಡಿಮೆ ಅಂತರದ ಗೆಲುವು ಇದಾಗಿದೆ. 193 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ 170 ರನ್‌ಗಳಿಗೆ ಆಲೌಟ್ ಆಯಿತು. ಶೋಯೆಬ್ ಬಷೀರ್ ಮೊಹಮ್ಮದ್ ಸಿರಾಜ್ ಅವರನ್ನು ಔಟ್ ಮಾಡುವ ಮೂಲಕ ಪಂದ್ಯವನ್ನು ಮುಗಿಸಿ ಇಂಗ್ಲೆಂಡ್‌ಗೆ ಗೆಲುವು ತಂದಿತ್ತರು.
ತಮ್ಮ ಪ್ರಭಾವಶಾಲಿ ಆಲ್‌ರೌಂಡರ್ ಪ್ರದರ್ಶನಕ್ಕಾಗಿ ಬೆನ್ ಸ್ಟೋಕ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಭಾರತ ಈಗ ಜುಲೈ 23 ರಂದು ಮ್ಯಾಂಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿರುವ ನಾಲ್ಕನೇ ಮತ್ತು ಅಂತಿಮ ಪಂದ್ಯದಲ್ಲಿ ಸರಣಿಯನ್ನು ಸಮಬಲಗೊಳಿಸುವ ಗುರಿ ಹೊಂದಿದೆ.