ಢಾಕಾ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಐಪಿಎಲ್ (IPL 2026) ಈ ಬಾರಿ ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಭಾರತದ ಪ್ರಮುಖ ಪ್ರಸಾರ ಸಂಸ್ಥೆಯಾದ ಜಿಯೋಸ್ಟಾರ್ (JioStar), ಬಾಂಗ್ಲಾದೇಶದಲ್ಲಿ ಐಪಿಎಲ್ ಪಂದ್ಯಗಳನ್ನು ಪ್ರಸಾರ ಮಾಡುವ ಒಪ್ಪಂದವನ್ನು ಅಧಿಕೃತವಾಗಿ ರದ್ದುಗೊಳಿಸಿದೆ. ಇದರಿಂದಾಗಿ ಈ ಬಾರಿ ಬಾಂಗ್ಲಾದೇಶದ ಕಿರುತೆರೆಗಳಲ್ಲಿ ಅಧಿಕೃತವಾಗಿ ಐಪಿಎಲ್ ಪಂದ್ಯಗಳು ಲಭ್ಯವಿರುವುದಿಲ್ಲ.
ಜಿಯೋಸ್ಟಾರ್ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲು ಮುಖ್ಯ ಕಾರಣ ಆರ್ಥಿಕ ವ್ಯವಹಾರಗಳಲ್ಲಿನ ವ್ಯತ್ಯಯ. ಬಾಂಗ್ಲಾದೇಶದ ಪ್ರಸಾರ ಸಂಸ್ಥೆಯಾದ ಟಿ-ಸ್ಪೋರ್ಟ್ಸ್ (TSports) ಜೊತೆಗಿನ ಒಪ್ಪಂದವನ್ನು ಜಿಯೋಸ್ಟಾರ್ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ. ಒಪ್ಪಂದದ ಪ್ರಕಾರ ನಿಗದಿತ ಸಮಯದಲ್ಲಿ ಹಣ ಪಾವತಿ ಮಾಡಲು ಟಿ-ಸ್ಪೋರ್ಟ್ಸ್ ವಿಫಲವಾಗಿರುವುದು ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಪದೇ ಪದೇ ಪಾವತಿ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಜಿಯೋಸ್ಟಾರ್ ಈ ಕ್ರಮ ಕೈಗೊಂಡಿದೆ. ಇದು ಕೇವಲ ಐಪಿಎಲ್‌ಗೆ ಮಾತ್ರವಲ್ಲದೆ, ಮಹಿಳಾ ಪ್ರೀಮಿಯರ್ ಲೀಗ್ (WPL) ಪ್ರಸಾರಕ್ಕೂ ಅನ್ವಯಿಸುತ್ತದೆ.
ಕ್ರೀಡಾ ಸಂಬಂಧಗಳ ಮೇಲೆ ಪರಿಣಾಮ
ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರ ಸ್ಥಗಿತಗೊಳ್ಳಲು ಕೇವಲ ಆರ್ಥಿಕ ಕಾರಣಗಳು ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಉಂಟಾಗಿರುವ ರಾಜತಾಂತ್ರಿಕ ಮತ್ತು ಕ್ರೀಡಾ ಸಂಬಂಧಗಳ ಬಿಕ್ಕಟ್ಟು ಕೂಡ ಹಿನ್ನೆಲೆಯಾಗಿದೆ. ಮುಸ್ತಫಿಜುರ್ ರೆಹಮಾನ್ ಅವರ ಐಪಿಎಲ್ ಹರಾಜು ಪ್ರಕ್ರಿಯೆ ಮತ್ತು ಬಿಡುಗಡೆಯ ವಿಚಾರದಲ್ಲಿ ಉಂಟಾದ ವಿವಾದದ ಬೆನ್ನಲ್ಲೇ ಬಾಂಗ್ಲಾದೇಶ ಸರ್ಕಾರವು ಐಪಿಎಲ್ ಪ್ರಸಾರದ ಮೇಲೆ ನಿಷೇಧ ಹೇರುವ ಕುರಿತು ಚಿಂತನೆ ನಡೆಸಿತ್ತು. ಇದೀಗ ಜಿಯೋಸ್ಟಾರ್ ಸಂಸ್ಥೆಯೇ ಒಪ್ಪಂದದಿಂದ ಹಿಂದೆ ಸರಿದಿರುವುದು ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಹೊಡೆತ ನೀಡಿದೆ.
ಅಭಿಮಾನಿಗಳಿಗೆ ನಿರಾಸೆ
ಬಾಂಗ್ಲಾದೇಶದಲ್ಲಿ ಐಪಿಎಲ್‌ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಲ್ಲಿನ ಆಟಗಾರರು ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದು ಮತ್ತು ಅಲ್ಲಿನ ಜನರು ಪಂದ್ಯಗಳನ್ನು ವೀಕ್ಷಿಸುವುದು ಸಾಮಾನ್ಯವಾಗಿದೆ. ಆದರೆ, ಪ್ರಸ್ತುತ ಬೆಳವಣಿಗೆಯಿಂದಾಗಿ ಅಧಿಕೃತ ಪ್ರಸಾರ ಮಾರ್ಗಗಳು ಬಂದ್ ಆಗಿವೆ. ಬಾಂಗ್ಲಾದೇಶ ಸರ್ಕಾರವು ಈ ಬಗ್ಗೆ ಮರುಚಿಂತನೆ ನಡೆಸುವ ಸೂಚನೆ ನೀಡಿದ್ದರೂ, ಜಿಯೋಸ್ಟಾರ್ ಹೊರನಡೆದಿರುವುದರಿಂದ ಈ ಸೀಸನ್‌ನಲ್ಲಿ ಪಂದ್ಯಗಳ ನೇರ ಪ್ರಸಾರಕ್ಕೆ ಇದ್ದ ಎಲ್ಲಾ ಹಾದಿಗಳು ಮುಚ್ಚಲ್ಪಟ್ಟಿವೆ. ಇದು ವೀಕ್ಷಕರ ಸಂಖ್ಯೆಯ ಮೇಲೆ ಭಾರಿ ಪರಿಣಾಮ ಬೀರಲಿದ್ದು, ಕ್ರಿಕೆಟ್ ಮಾರುಕಟ್ಟೆಗೂ ನಷ್ಟ ಉಂಟುಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ ; ಕೆಕೆಆರ್ ಬೌಲರ್‌ಗಳ ಕಳಪೆ ಪ್ರದರ್ಶನ : ವಿಮರ್ಶಕರಿಗೆ ಖಡಕ್ ಉತ್ತರ ನೀಡಿದ ಮನ್ವಿಂದರ್ ಬಿಸ್ಲಾ



















