ಬೆಂಗಳೂರು: ಗ್ರೇಟರ್ ಬೆಂಗಳೂರು ವಿಧೇಯಕ ಖಂಡಿಸಿ ಜೆಡಿಎಸ್ ನಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೆಸರು ಹೇಳಿಕೊಂಡು ಕಾಂಗ್ರೆಸ್ ನಗರವನ್ನು ಹಾಳು ಮಾಡುತ್ತಿದೆ. ಅಲ್ಲದೇ, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ರಮೇಶ್ ಗೌಡ, ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳಿಂದ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಜನರಿಗೆ ನಿತ್ಯ ನರಕ ತೋರಿಸುತ್ತಿದೆ. ಕೆಂಪೇಗೌಡರು ಬೆಂಗಳೂರು ಕಟ್ಟಿದ್ದರು. ಈ ಸರಕಾರ ಬೆಂಗಳೂರನ್ನು ಛಿದ್ರ ಛಿದ್ರ ಮಾಡುತ್ತಿದೆ. ಈ ಕಾಂಗ್ರೆಸ್ ಸರ್ಕಾರ ಬೆಂಗಳೂರನ್ನು 7 ಭಾಗ ಮಾಡಲು ಹೊರಟಿದೆ. ಇವರು ರಿಯಲ್ ಎಸ್ಟೇಟ್ ಮಾಡುವುದಕ್ಕಾಗಿ 7 ಭಾಗ ಮಾಡಲು ಹೊರಟಿದ್ದಾರೆ. ಬೆಂಗಳೂರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ನಗರದಲ್ಲಿ ನೀರಿಲ್ಲ, ಟ್ರಾಫಿಕ್ ಜಾಮ್ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಈ ಸರಕಾರದಲ್ಲಿ ಜನರು ನಿತ್ಯ ಸತ್ತು ಬದುಕುತ್ತಿದ್ದಾರೆ. ಹೀಗಾಗಿ ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕಬಾರದು. ಕೂಡಲೇ ರಾಜ್ಯ ಸರ್ಕಾರ ಈ ವಿಧೇಯಕವನ್ನು ಹಿಂಪಡೆಯಬೇಕು. ಈ ಬಿಲ್ ನ್ನು ವಾಪಸ್ ಪಡೆಯದೇ ಹೋದರೆ ಸಿಎಂ ಮತ್ತು ಸಚಿವರ ಕಾರ್ಯಕ್ರಮಗಳಿಗೆ ಕಪ್ಪುಪಟ್ಟಿ ಪ್ರದರ್ಶನ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಲಿನ ದರ, ಟಿಕೆಟ್ ದರ ಎಲ್ಲವೂ ಜಾಸ್ತಿ ಆಗಿದೆ. ಬೆಂಗಳೂರಿನಲ್ಲಿ ಕುಡಿಯೋಕೆ ನೀರು ಕೊಡುತ್ತಿಲ್ಲ. ನೀರಿನ ದರ ಏರಿಕೆ ಮಾಡುತ್ತಿದ್ದಾರೆ. ಬೆಂಗಳೂರಿಗೆ ಅಂಟಿರುವ ಶಾಪ ವಿಮೋಚನೆ ಆಗಬೇಕಾದರೆ ಈ ಸರ್ಕಾರವನ್ನು ಕಿತ್ತು ಹಾಕಬೇಕು ಎಂದು ಗುಡುಗಿದ್ದಾರೆ. ಮಾಜಿ ಶಾಸಕ ತಿಪ್ಪೇಸ್ವಾಮಿ, ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ರಮೇಶ್ ಗೌಡ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗಿಯಾಗಿದ್ದರು.