ವಾಷಿಂಗ್ಟನ್/ನವದೆಹಲಿ: ಸಾಮೂಹಿಕ ವಲಸೆ ಎಂಬುದು “ಅಮೆರಿಕದ ಕನಸಿನ ಕಳ್ಳತನ” ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೀಡಿರುವ ಹೇಳಿಕೆ ಇದೀಗ ತೀವ್ರ ಸ್ವರೂಪದ ಚರ್ಚೆಗೆ ಗ್ರಾಸವಾಗಿದೆ. ವ್ಯಾನ್ಸ್ ಅವರ ಪತ್ನಿ ಉಷಾ ಅವರು ಭಾರತೀಯ ಮೂಲದವರಾಗಿದ್ದು, ವಲಸಿಗರ ಕುರಿತಾದ ಈ ಹೇಳಿಕೆಯು ವ್ಯಾನ್ಸ್ ಅವರ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ ಎಂದು ಟೀಕಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ನಲ್ಲಿ ಪೋಸ್ಟ್ ವೊಂದನ್ನು ಮಾಡಿರುವ ಜೆ.ಡಿ. ವ್ಯಾನ್ಸ್, ಸಾಮೂಹಿಕ ವಲಸೆಯು ಅಮೆರಿಕದ ಕಾರ್ಮಿಕರ ಅವಕಾಶಗಳನ್ನು ಕಸಿದುಕೊಳ್ಳುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಈ ಅಭಿಪ್ರಾಯಕ್ಕೆ ವಿರುದ್ಧವಾಗಿರುವ ಅಧ್ಯಯನಗಳು ಹಳೆಯ ವ್ಯವಸ್ಥೆಯಿಂದ ಶ್ರೀಮಂತರಾಗುತ್ತಿರುವವರಿಂದ ಪ್ರಾಯೋಜಿತವಾಗಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪತ್ನಿ ಉಷಾ ವಿರುದ್ಧ ತಿರುಗಿಬಿದ್ದ ಟೀಕಾಕಾರರು
ವ್ಯಾನ್ಸ್ ಅವರ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಜಕೀಯ ವಿಮರ್ಶಕ ವಜಾಹತ್ ಅಲಿ ಸೇರಿದಂತೆ ಹಲವರು, ವ್ಯಾನ್ಸ್ ಪತ್ನಿ ಉಷಾ ಅವರ ಹಿನ್ನೆಲೆಯನ್ನು ಪ್ರಸ್ತಾಪಿಸಿದ್ದಾರೆ. ಉಷಾ ಅವರು ಭಾರತೀಯ ವಲಸಿಗರ ಪುತ್ರಿಯಾಗಿದ್ದು, “ಹಾಗಾದರೆ ನೀವು ನಿಮ್ಮ ಪತ್ನಿ ಉಷಾ, ಅವರ ಭಾರತೀಯ ಕುಟುಂಬ ಮತ್ತು ನಿಮ್ಮ ಮಿಶ್ರ ತಳಿಯ ಮಕ್ಕಳನ್ನು ಭಾರತಕ್ಕೆ ವಾಪಸ್ ಕಳುಹಿಸುತ್ತೀರಾ?” ಎಂದು ಪ್ರಶ್ನಿಸುವ ಮೂಲಕ ವ್ಯಾನ್ಸ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಧರ್ಮ ಮತ್ತು ಸಂಸ್ಕೃತಿಯ ಬಗ್ಗೆಯೂ ವಿವಾದ
ಇತ್ತೀಚೆಗೆ ನ್ಯೂಯಾರ್ಕ್ ಪೋಸ್ಟ್ ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿದ್ದ ವ್ಯಾನ್ಸ್, ಅಮೆರಿಕನ್ನರು ತಮ್ಮದೇ ಜನಾಂಗ, ಭಾಷೆ ಅಥವಾ ಚರ್ಮದ ಬಣ್ಣವನ್ನು ಹೊಂದಿರುವ ನೆರೆಹೊರೆಯವರನ್ನು ಇಷ್ಟಪಡುವುದು “ಸಂಪೂರ್ಣವಾಗಿ ಸಮಂಜಸ” ಎಂದು ಹೇಳಿದ್ದರು. ಇದು ವರ್ಣಭೇದ ನೀತಿಯನ್ನು ಪ್ರಚೋದಿಸುತ್ತದೆ ಎಂದು ನಾಗರಿಕ ಹಕ್ಕುಗಳ ಹೋರಾಟಗಾರರು ಖಂಡಿಸಿದ್ದರು.
ಅಲ್ಲದೆ, ಹಿಂದೂ ಧರ್ಮೀಯರಾಗಿರುವ ತಮ್ಮ ಪತ್ನಿ ಉಷಾ ಅವರು ಮುಂದೊಂದು ದಿನ ಕ್ರೈಸ್ತರಾಗಿ ಮತಾಂತರಗೊಳ್ಳಲಿ ಎಂದು ತಾನು ಪ್ರಾಮಾಣಿಕವಾಗಿ ಬಯಸುವುದಾಗಿ ವ್ಯಾನ್ಸ್ ಇತ್ತೀಚೆಗೆ ಹೇಳಿದ್ದು ಕೂಡ ವಿವಾದಕ್ಕೆ ಕಾರಣವಾಗಿತ್ತು. ನಂತರ ಸ್ಪಷ್ಟನೆ ನೀಡಿದ್ದ ಅವರು, ಉಷಾ ಅವರಿಗೆ ಮತಾಂತರವಾಗುವ ಯಾವುದೇ ಯೋಜನೆಯಿಲ್ಲ ಮತ್ತು ನಾನು ಅವರ ನಂಬಿಕೆಗಳನ್ನು ಗೌರವಿಸುತ್ತೇನೆ ಎಂದು ತಿಳಿಸಿದ್ದರು.
ಟ್ರಂಪ್ ಆಡಳಿತದ ಕಠಿಣ ವಲಸೆ ನೀತಿ
ಡೊನಾಲ್ಡ್ ಟ್ರಂಪ್ ಆಡಳಿತವು ವಲಸೆ ನೀತಿಗಳನ್ನು ಬಿಗಿಗೊಳಿಸುತ್ತಿರುವ ಸಂದರ್ಭದಲ್ಲೇ ವ್ಯಾನ್ಸ್ ಈ ಹೇಳಿಕೆ ನೀಡಿದ್ದಾರೆ. ಡಿಸೆಂಬರ್ 3ರಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳು 19 “ಹೈ-ರಿಸ್ಕ್” ದೇಶಗಳಿಂದ ಬರುವ ಗ್ರೀನ್ ಕಾರ್ಡ್, ಪೌರತ್ವ ಮತ್ತು ಆಶ್ರಯ ಅರ್ಜಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿದಿದೆ. ಅಫ್ಘಾನಿಸ್ತಾನ ನಿರಾಶ್ರಿತನೊಬ್ಬ ನ್ಯಾಷನಲ್ ಗಾರ್ಡ್ ಸದಸ್ಯನನ್ನು ಹತ್ಯೆಗೈದ ಘಟನೆಯ ನಂತರ ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ:ಪ್ರವಾಹ ಪೀಡಿತ ಶ್ರೀಲಂಕಾಕ್ಕೆ ಎಕ್ಸಪೈರಿ ಡೇಟ್ ಆಹಾರ ಕಳುಹಿಸಿದ ಪಾಕ್ : ನೆಟ್ಟಿಗರು ಕೆಂಡಾಮಂಡಲ



















