ಬೆಂಗಳೂರು: ಆಟವಾಡುತ್ತಿದ್ದ ಮಗುವಿನ ಮೇಲೆ ಜೆಸಿಬಿ ಹರಿದ ಪರಿಣಾಮ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಿಲಿಕಾನ್ ಸಿಟಿ ಕಾಡುಗೋಡಿ ಬಳಿಯ ಸಿಟಿ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಥವನ್ ರೆಡ್ಡಿ (2) ಸಾವನ್ನಪ್ಪಿರುವ ದುರ್ದೈವಿ ಮಗು ಎನ್ನಲಾಗಿದೆ. ಮಂಗಳವಾರ ಸಂಜೆ 6.30ಕ್ಕೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜೆಸಿಬಿ ಚಾಲಕ ಅತಿಯಾದ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಮನೆಯ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಜೆಸಿಬಿ ಹರಿದಿದೆ. ಮಗುವಿನ ತಲೆಯ ಮೇಲೆಯೇ ಜೆಸಿಬಿ ಹರಿದಿದೆ. ಕೂಡಲೇ ಮಗುವನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ ಎನ್ನಲಾಗಿದೆ. ಈ ಕುರಿತು ಮಹಾದೇವಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.