ಬೆಂಗಳೂರು: ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಿಂದ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಿದ ಭಾರತ ತಂಡದ ನಿರ್ಧಾರವನ್ನು ಮಾಜಿ ಕ್ರಿಕೆಟ್ ಕೋಚ್ ರವಿಶಾಸ್ತ್ರಿ ತೀವ್ರವಾಗಿ ಟೀಕಿಸಿದ್ದಾರೆ. ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಮಾಡಿದ ಮೂರು ಬದಲಾವಣೆಗಳಲ್ಲಿ ಬುಮ್ರಾ ಕೂಡ ಒಬ್ಬರಾಗಿದ್ದರು.
ಬುಮ್ರಾ ಅವರಿಗೆ ಒಂದು ವಾರದ ವಿಶ್ರಾಂತಿ ನೀಡಿದ ನಂತರವೂ ಎಡ್ಜ್‌ಬಾಸ್ಟನ್ ಟೆಸ್ಟ್‌ನಿಂದ ಅವರನ್ನು ಹೊರಗಿಡುವ ನಿರ್ಧಾರದ ಬಗ್ಗೆ ರವಿಶಾಸ್ತ್ರಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹೆಡಿಂಗ್ಲೆಯಲ್ಲಿ ಸೋಲು ಅನುಭವಿಸಿದರೂ, ಬುಮ್ರಾ ಅವರನ್ನು ಮೂರು ಟೆಸ್ಟ್‌ಗಳಿಗೆ ಆಡಿಸುವ ಯೋಜನೆಗೆ ಯಾವುದೇ ಬದಲಾವಣೆ ಇಲ್ಲ ಎಂದು ಭಾರತದ ಕೋಚ್ ಗೌತಮ್ ಗಂಭೀರ್ ಹೇಳಿದ್ದರು. ಆದಾಗ್ಯೂ, ಸರಣಿಯ ದೃಷ್ಟಿಯಿಂದ ಈ ಪಂದ್ಯ ಮುಖ್ಯವಾಗಿರುವುದರಿಂದ ಬುಮ್ರಾಗೆ ವಿಶ್ರಾಂತಿ ನೀಡುವ ಪರವಾಗಿ ಶಾಸ್ತ್ರಿ ಇರಲಿಲ್ಲ.
ಸ್ಕೈ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಶಾಸ್ತ್ರಿ, “ಭಾರತದ ಆಟದ ರೀತಿ ನೋಡಿದರೆ, ಇದು ಅತ್ಯಂತ ಪ್ರಮುಖ ಟೆಸ್ಟ್ ಪಂದ್ಯವಾಗಿದೆ. ನೀವು ನ್ಯೂಜಿಲೆಂಡ್ ವಿರುದ್ಧ 3, ಆಸ್ಟ್ರೇಲಿಯಾ ವಿರುದ್ಧ 3 ಮತ್ತು ಇಲ್ಲಿ ಮೊದಲ ಟೆಸ್ಟ್ ಸೋತಿದ್ದೀರಿ. ನೀವು ಗೆಲುವಿನ ಹಾದಿಗೆ ಮರಳಲು ಬಯಸುತ್ತೀರಿ. ನಿಮ್ಮ ತಂಡದಲ್ಲಿ ಜಗತ್ತಿನ ಅತ್ಯುತ್ತಮ ವೇಗದ ಬೌಲರ್ ಇದ್ದಾನೆ, ಮತ್ತು 7 ದಿನಗಳ ವಿಶ್ರಾಂತಿಯ ನಂತರವೂ ನೀವು ಅವನನ್ನು ಹೊರಗಿಡುತ್ತೀರಿ, ಇದು ನಂಬಲಾಗದ ಸಂಗತಿ” ಎಂದು ಹೇಳಿದ್ದಾರೆ.
“ವಿಶ್ರಾಂತಿ ನಿರ್ಧಾರ ಆಟಗಾರನ ಕೈಯಲ್ಲಿ ಇರಬಾರದು”
ಆಟಗಾರರಿಗೆ ವಿಶ್ರಾಂತಿ ನೀಡುವ ನಿರ್ಧಾರವನ್ನು ಆಟಗಾರರ ಕೈಯಿಂದ ತೆಗೆದುಕೊಂಡು ನಾಯಕ ಮತ್ತು ತರಬೇತಿ ಸಿಬ್ಬಂದಿ ಮಾಡಬೇಕು ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
“ಅವರಿಗೆ ಒಂದು ವಾರ ರಜೆ ಇತ್ತು. ಬುಮ್ರಾ ಈ ಪಂದ್ಯ ಆಡದಿರುವುದು ನನಗೆ ಸ್ವಲ್ಪ ಅಚ್ಚರಿ ತಂದಿದೆ. ವಿಶ್ರಾಂತಿ ನೀಡುವ ನಿರ್ಧಾರ ಆಟಗಾರನ ಕೈಯಲ್ಲಿ ಇರಬಾರದು. ನಾಯಕ ಮತ್ತು ತರಬೇತಿ ಸಿಬ್ಬಂದಿ ಯಾರು ಆಡಬೇಕು ಎಂದು ನಿರ್ಧರಿಸಬೇಕು. ಸರಣಿಯ ದೃಷ್ಟಿಯಿಂದ ಇದು ಪ್ರಮುಖ ಪಂದ್ಯವಾಗಿದ್ದರೆ, ಅವರು ಬೇರೆ ಯಾವುದೇ ಪಂದ್ಯಕ್ಕಿಂತ ಈ ಪಂದ್ಯವನ್ನು ಆಡಬೇಕು. ಲಾರ್ಡ್ಸ್ ನಂತರ ಬರಬಹುದು. ಇದು ಪ್ರಮುಖ ಪಂದ್ಯವಾಗಿದ್ದು, ನೀವು ತಕ್ಷಣವೇ ತಿರುಗೇಟು ನೀಡಬೇಕು” ಎಂದು ಶಾಸ್ತ್ರಿ ಹೇಳಿದ್ದಾರೆ.
ಸುದರ್ಶನ್ ಕೈಬಿಟ್ಟಿದ್ದಕ್ಕೂ ಶಾಸ್ತ್ರಿ ಅಸಮಾಧಾನ
ಬುಮ್ರಾ ಜೊತೆಗೆ, ಸಾಯಿ ಸುದರ್ಶನ್ ಮತ್ತು ಶಾರ್ದೂಲ್ ಠಾಕೂರ್ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ನೀಡಲಾಗಿದೆ. ಸುದರ್ಶನ್ ಅವರನ್ನು ಕೈಬಿಟ್ಟಿದ್ದು ಸ್ವಲ್ಪ ಕಠಿಣ ನಿರ್ಧಾರ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟರು.
“ನಿತೀಶ್ ರೆಡ್ಡಿ, ಈ ಪರಿಸ್ಥಿತಿಗಳಲ್ಲಿ ನಿರೀಕ್ಷಿತವಾಗಿತ್ತು. ಹವಾಮಾನ ಮೋಡದಿಂದ ಕೂಡಿದೆ. ಮತ್ತು ಮತ್ತೆ ಕುಲದೀಪ್ ಮತ್ತು ವಾಷಿಂಗ್ಟನ್ ಸುಂದರ್ ನಡುವೆ ಆಯ್ಕೆ ಇತ್ತು ಎಂದು ನಾನು ಭಾವಿಸುತ್ತೇನೆ. ಸಾಯಿ ಸುದರ್ಶನ್ ಅವರನ್ನು ಕೈಬಿಟ್ಟಿದ್ದು ನನಗೆ ಸ್ವಲ್ಪ ಅಚ್ಚರಿ ತಂದಿದೆ ಏಕೆಂದರೆ ಅವರು ನಿಜವಾಗಿಯೂ ಉತ್ತಮವಾಗಿ ಆಡಿದರು. ಇದು ಕಠಿಣ ನಿರ್ಧಾರ. ಆ ಟೆಸ್ಟ್ ಪಂದ್ಯದಲ್ಲಿ ಅವರು ನಿಜವಾಗಿಯೂ ಉತ್ತಮವಾಗಿ ಆಡಿದರು ಎಂದು ನಾನು ಭಾವಿಸಿದೆ, ಆದ್ದರಿಂದ, ಅವರು ಹೊರಗೆ ಹೋಗಿದ್ದಾರೆ ಮತ್ತು ಕುಲದೀಪ್ ಯಾದವ್, ಪಾಪ, ಕಾಯಬೇಕಾಗಿದೆ” ಎಂದು ಶಾಸ್ತ್ರಿ ಹೇಳಿದರು.
ಬುಮ್ರಾ ಬದಲಿಗೆ ಆಕಾಶ್ ದೀಪ್ ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಿಕೊಳ್ಳಲಾಗಿದೆ.