ಮ್ಯಾಂಚೆಸ್ಟರ್: ಟೀಮ್ ಇಂಡಿಯಾದ ವೇಗದ ಬೌಲಿಂಗ್‌ನ ಬೆನ್ನೆಲುಬಾಗಿರುವ ಜಸ್‌ಪ್ರೀತ್ ಬುಮ್ರಾ, ನಿರಂತರ ದೈಹಿಕ ಸಮಸ್ಯೆಗಳಿಂದಾಗಿ ಟೆಸ್ಟ್ ಕ್ರಿಕೆಟ್‌ಗೆ ಶೀಘ್ರದಲ್ಲೇ ವಿದಾಯ ಹೇಳಬಹುದು ಎಂದು ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಆತಂಕಕಾರಿ ಹೇಳಿಕೆ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಅವರ ಮಂಕಾದ ಪ್ರದರ್ಶನ ಮತ್ತು ದೈಹಿಕ ಬಳಲಿಕೆಯ ಹಿನ್ನೆಲೆಯಲ್ಲಿ ಕೈಫ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಲು ಹೆಣಗಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸಿತ್ತು. ಅವರ ಬೌಲಿಂಗ್ ವೇಗದಲ್ಲಿ ಗಣನೀಯ ಇಳಿಕೆಯಾಗಿದ್ದು, ಮೂರನೇ ದಿನದಾಟದಲ್ಲಿ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಪಂದ್ಯದ ವೇಳೆ ಅವರು ದೈಹಿಕ ಅಸ್ವಸ್ಥತೆಯಿಂದ ಡ್ರೆಸ್ಸಿಂಗ್ ರೂಮ್‌ಗೆ ಹಿಂತಿರುಗಿದ್ದು ಅವರ ಫಿಟ್ನೆಸ್ ಕುರಿತು ಊಹಾಪೋಹಗಳಿಗೆ ಕಾರಣವಾಗಿತ್ತು.
ಈ ಬಗ್ಗೆ ತಮ್ಮ ‘ಎಕ್ಸ್’ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಮೊಹಮ್ಮದ್ ಕೈಫ್, “ನನ್ನ ಪ್ರಕಾರ, ಮುಂಬರುವ ಟೆಸ್ಟ್ ಪಂದ್ಯಗಳಲ್ಲಿ ಜಸ್‌ಪ್ರೀತ್ ಬುಮ್ರಾ ಆಡದೇ ಇರಬಹುದು ಮತ್ತು ಅವರು ನಿವೃತ್ತಿ ಹೊಂದಿದರೂ ಅಚ್ಚರಿಯಿಲ್ಲ. ಅವರು ತಮ್ಮ ದೇಹದೊಂದಿಗೆ ಹೋರಾಡುತ್ತಿದ್ದಾರೆ, ನಿಧಾನವಾಗಿ ಬೌಲ್ ಮಾಡುತ್ತಿದ್ದಾರೆ ಮತ್ತು ಈ ಪಂದ್ಯದಲ್ಲಿ ಅವರಲ್ಲಿ ಯಾವುದೇ ವೇಗ ಕಾಣಿಸುತ್ತಿಲ್ಲ,” ಎಂದು ಹೇಳಿದ್ದಾರೆ.
“ಬುಮ್ರಾ ಒಬ್ಬ ಸ್ವತಂತ್ರ ವ್ಯಕ್ತಿ. ತಮ್ಮಿಂದ ಶೇ. 100ರಷ್ಟು ಸಾಮರ್ಥ್ಯದಲ್ಲಿ ಬೌಲ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದರೆ, ತಂಡವನ್ನು ಗೆಲ್ಲಿಸಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ. ಈಗ ಅವರೇ ತಮ್ಮ ಆಟವನ್ನು ನಿರಾಕರಿಸುತ್ತಿದ್ದಾರೆ ಎಂಬುದು ನನ್ನ ಭಾವನೆ,” ಎಂದು ಕೈಫ್ ಎಚ್ಚರಿಸಿದ್ದಾರೆ.
ಭಾರತೀಯ ತಂಡದ ಬದಲಾವಣೆಯ ಪರ್ವದ ಬಗ್ಗೆ ಮಾತನಾಡಿದ ಅವರು, “ಮೊದಲು ರೋಹಿತ್ ಶರ್ಮಾ, ನಂತರ ವಿರಾಟ್ ಕೊಹ್ಲಿ ಹೋದರು. ಆರ್. ಅಶ್ವಿನ್ ಕೂಡ ಈಗ ತಂಡದಲ್ಲಿಲ್ಲ. ಇದೀಗ ಬಹುಶಃ ಬುಮ್ರಾ ಸರದಿ ಇರಬಹುದು. ಅವರಿಲ್ಲದೆ ಟೆಸ್ಟ್ ಪಂದ್ಯಗಳನ್ನು ನೋಡಲು ಅಭಿಮಾನಿಗಳು ಒಗ್ಗಿಕೊಳ್ಳಬೇಕು,” ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.