ಶ್ರೀನಗರ: ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ) ಇಲ್ಲದೆ, ಜಮ್ಮು ಮತ್ತು ಕಾಶ್ಮೀರ ಅಪೂರ್ಣ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಇತ್ತೀಚೆಗೆ ಪಿಒಕೆಯನ್ನು ಭಾರತದೊಂದಿಗೆ ವಿಲೀನಗೊಳಿಸಬೇಕೆಂದು ಸಾಕಷ್ಟು ಆಗ್ರಹ ಕೇಳಿ ಬರುತ್ತಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಕೂಡ ಪಿಒಕೆ ದೇಶದ ಅವಿಭಾಜ್ಯ ಅಂಗ ಎಂದು ಹೇಳುತ್ತಲೇ ಇದ್ದಾರೆ. ಈಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಪಿಒಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ.
ಅಖನೂರ್ ಸೆಕ್ಟರ್ನಲ್ಲಿನ ಟಾಂಡಾ ಶಸ್ತ್ರಾಸ್ತ್ರ ಬ್ರಿಗೇಡ್ನಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಸಿಂಗ್, ಪಿಒಕೆ ಇಲ್ಲದೆ ಜಮ್ಮು-ಕಾಶ್ಮೀರ ಅಪೂರ್ಣ ಎಂದು ಹೇಳುವ ಮೂಲಕ ಪರೋಕ್ಷವಾಗ ಪಿಒಕೆ ವಶಪಡಿಸಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ಪಿಒಕೆ ಹೊರತಾದ ಜಮ್ಮು-ಕಾಶ್ಮೀರ(Jammu and Kashmir) ಅಪೂರ್ಣವಾಗಿದೆ. ಪಿಒಕೆಯು ದೇಶದ ಕಿರೀಟದ ಹೆಮ್ಮೆಯ ಆಭರಣ ಎಂದಿದ್ದಾರೆ. 370ನೇ ವಿಧಿ ರದ್ದತಿ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಅಂತ್ಯ ಹಾಡಲು ಮುಂದಾಗಿದ್ದೇವೆ. ನಮ್ಮ ಯತ್ನದ ಫಲವಾಗಿ ಕಣಿವೆಯಲ್ಲಿ ಅಭಿವೃದ್ಧಿ ಹೆಚ್ಚಾಗಿದೆ. ಪಿಒಕೆ ಎನ್ನುವುದು ಪಾಕಿಸ್ತಾನಕ್ಕೆ ವಿದೇಶಿ ಪ್ರಾಂತ್ಯ ಎಂದಿದ್ದಾರೆ.
1965ರಿಂದಲೂ ಪಾಕ್ ಉಗ್ರರನ್ನು , ಅಕ್ರಮ ನುಸುಳುಕೋರರನ್ನು ಪ್ರಚೋದಿಸುತ್ತಲೇ ಬಂದಿದೆ. ಇತಿಹಾಸದಲ್ಲಿ ನಾವು ಎಲ್ಲ ಯುದ್ಧಗಳಲ್ಲಿ ಪಾಕಿಸ್ತಾನವನ್ನು ಮಣಿಸಿದ್ದೇವೆ ಎಂದು ಹೇಳಿದ್ದಾರೆ.