2024ರಲ್ಲಿ ಭಾರತೀಯ ಕ್ರಿಕೆಟ್ ತಂಡ ಸೋಲು- ಗೆಲುವು, ಸಿಹಿ- ಕಹಿ ಅನುಭವಿಸಿದೆ. ಈ ಪೈಕಿ ಹಲವು ಆಟಗಾರರು ಉತ್ತಮ ಪ್ರದರ್ಶನಕ್ಕೆ ಸಾಕ್ಷಿಯಾದರೆ, ಹಲವರು ಪ್ರತಿಭೆಗೆ ತಕ್ಕ ಉತ್ತರ ನೀಡದೆ ಮಂಕಾಗಿದ್ದಾರೆ. ಭಾರತ ತಂಡವು ಈ ವರ್ಷ 15 ಟೆಸ್ಟ್ ಪಂದ್ಯಗಳನ್ನಾಡಿದ್ದು, 8 ಜಯ ಸಾಧಿಸಿದರೆ, 6ರಲ್ಲಿ ಸೋಲು ಕಂಡಿದೆ. ಈ ಸಿಹಿ-ಕಹಿ ನಡುವೆ ಯಶಸ್ಸಿನ ಶಿಖರವೇರಿದ್ದು ಯುವ ದಾಂಡಿಗ ಯಶಸ್ವಿ ಜೈಸ್ವಾಲ್. ಈ ವರ್ಷ ಟೆಸ್ಟ್ ನಲ್ಲಿ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಯಶಸ್ವಿ ಜೈಸ್ವಾಲ್ ಎಂಬುವುದು ವಿಶೇಷ.
ಭಾರತ ತಂಡದ ಪರ ಈ ವರ್ಷ 29 ಇನಿಂಗ್ಸ್ ಆಡಿರುವ ಯಶಸ್ವಿ ಒಟ್ಟು 1478 ರನ್ ಗಳಿಸಿದ್ದಾರೆ. ಈ ವರ್ಷ ಭಾರತ ಪರ ಅತ್ಯಧಿಕ ಟೆಸ್ಟ್ ಶತಕ ಸಿಡಿಸಿದ ಬ್ಯಾಟರ್ ಗಳ ಪಟ್ಟಿಯಲ್ಲೂ ಯಶಸ್ವಿ ಜೈಸ್ವಾಲ್ ಮೂರು ಶತಕ ಗಳಿಸುವ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ. 2024 ರಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಬ್ಯಾಟರ್ ಕೂಡ ಯಶಸ್ವಿ ಜೈಸ್ವಾಲ್ ಆಗಿದ್ದಾರೆ. ಈ ವರ್ಷ ಅವರು 9 ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ.
ಈ ವರ್ಷ ಅತೀ ಹೆಚ್ಚು ಫೋರ್ ಬಾರಿಸಿದ ದಾಖಲೆ ಕೂಡ ಯಶಸ್ವಿ ಜೈಸ್ವಾಲ್ ಹೆಸರಿನಲ್ಲಿದೆ. ಈ ವರ್ಷ 29 ಇನಿಂಗ್ಸ್ಗಳಲ್ಲಿ ಜೈಸ್ವಾಲ್ 168 ಫೋರ್ ಗಳನ್ನು ಬಾರಿಸಿದ್ದಾರೆ. ಅಲ್ಲದೇ, 15 ಟೆಸ್ಟ್ ಪಂದ್ಯಗಳಲ್ಲಿ 36 ಸಿಕ್ಸ್ ಸಿಡಿಸಿರುವ ಜೈಸ್ವಾಲ್ ಈ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿದ್ದಾರೆ. ಟೆಸ್ಟ್ನಲ್ಲಿ ಈ ವರ್ಷ ಅತ್ಯುತ್ತಮ ಬ್ಯಾಟಿಂಗ್ ಸರಾಸರಿ ಹೊಂದಿದ್ದ ಆಟಗಾರ ಯಶಸ್ವಿ ಜೈಸ್ವಾಲ್ ಆಗಿದ್ದಾರೆ. 29 ಇನಿಂಗ್ಸ್ಗಳಲ್ಲಿ ಜೈಸ್ವಾಲ್ 54.74ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಗರಿಷ್ಠ ಸ್ಕೋರ್ ಕೂಡ ಜೈಸ್ವಾಲ್ ಹೆಸರಿನಲ್ಲಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್ ಅಜೇಯ 214* ರನ್ ಗಳಿಸಿದ್ದು, ಅವರ ಶ್ರೇಷ್ಠ ಸಾಧನೆಯಾಗಿದೆ.
ಈ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ 1400ಕ್ಕೂ ಅಧಿಕ ರನ್ ಗಳಿಸಿದ ವಿಶ್ವದ 2ನೇ ಬ್ಯಾಟರ್ ಎಂಬ ದಾಖಲೆಯನ್ನು ಯಶಸ್ವಿ ಜೈಸ್ವಾಲ್ ಮಾಡಿದ್ದಾರೆ. ಇಂಗ್ಲೆಂಡ್ನ ಜೋ ರೂಟ್ (1556 ರನ್ಸ್) ಅಗ್ರ ಸ್ಥಾನದಲ್ಲಿದ್ದಾರೆ. ಭಾರತದ ಪರ ಹೆಚ್ಚು ದಾಖಲೆ ಬರೆದಿರುವುದು ಈ ವರ್ಷ ಯಶಸ್ವಿ ಜೈಸ್ವಾಲ್ ಆಗಿದ್ದಾರೆ.