ಸಿಯಾಟಲ್ : ಅಮೆರಿಕದಲ್ಲಿ ಪೊಲೀಸ್ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿ ಜಾನ್ವಿ ಕಂಡುಲ ಅವರ ಕುಟುಂಬಕ್ಕೆ ಸಿಯಾಟಲ್ ನಗರ ಆಡಳಿತವು 29 ಮಿಲಿಯನ್ ಡಾಲರ್ (ಸುಮಾರು 240 ಕೋಟಿ ರೂಪಾಯಿ) ಭಾರಿ ಮೊತ್ತದ ಪರಿಹಾರವನ್ನು ಘೋಷಿಸಿದೆ. 2023ರಲ್ಲಿ ನಡೆದ ಈ ಭೀಕರ ಅಪಘಾತ ಮತ್ತು ಅದರ ನಂತರ ಪೊಲೀಸ್ ಅಧಿಕಾರಿಯೊಬ್ಬರು ಆಕೆಯ ಸಾವಿನ ಬಗ್ಗೆ ಆಡಿದ್ದ ಅವಹೇಳನಕಾರಿ ಮಾತುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದವು. ಇದೀಗ ನಗರ ಆಡಳಿತವು ನ್ಯಾಯಾಲಯದ ಹೊರಗೆ ಸಂಧಾನದ ಮೂಲಕ ಈ ದಾಖಲೆ ಮೊತ್ತದ ಪರಿಹಾರ ನೀಡಲು ಒಪ್ಪಿಕೊಂಡಿದೆ.
ಅಂದು ಏನಾಗಿತ್ತು?
23 ವರ್ಷದ ಜಾನ್ವಿ ಕಂಡುಲ ಸಿಯಾಟಲ್‌ನ ನಾರ್ತ್‌ಈಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು. 2023ರ ಜನವರಿಯಲ್ಲಿ ರಸ್ತೆ ದಾಟುತ್ತಿದ್ದಾಗ, ಗರಿಷ್ಠ 25 ಮೈಲು ವೇಗದ ಮಿತಿ ಇದ್ದ ರಸ್ತೆಯಲ್ಲಿ ಸುಮಾರು 74 ಮೈಲು ವೇಗದಲ್ಲಿ ಬಂದ ಪೊಲೀಸ್ ಅಧಿಕಾರಿ ಕೆವಿನ್ ಡೇವಿ ಅವರ ವಾಹನ ಜಾನ್ವಿಗೆ ಡಿಕ್ಕಿ ಹೊಡೆದಿತ್ತು. ಡ್ರಗ್ ಓವರ್‌ಡೋಸ್ ತುರ್ತು ಕರೆಗೆ ಸ್ಪಂದಿಸಲು ಹೋಗುತ್ತಿದ್ದ ಅಧಿಕಾರಿಯ ಬೇಜವಾಬ್ದಾರಿತನದ ಚಾಲನೆಗೆ ಭಾರತೀಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಬಲಿಯಾಗಿದ್ದರು.
ಜಾನ್ವಿ ಅವರ ಸಾವು ಕೇವಲ ಅಪಘಾತವಾಗಿ ಉಳಿಯದೆ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು ಮತ್ತೊಬ್ಬ ಪೊಲೀಸ್ ಅಧಿಕಾರಿ ಡೇನಿಯಲ್ ಆಡೆರರ್ ಅವರ ವರ್ತನೆಯಿಂದ. ಅಪಘಾತದ ನಂತರ ಸ್ಥಳಕ್ಕೆ ಬಂದಿದ್ದ ಆಡೆರರ್, ಜಾನ್ವಿ ಅವರ ಸಾವನ್ನು ಹಾಸ್ಯ ಮಾಡುತ್ತಾ, “ಆಕೆಯ ಜೀವನಕ್ಕೆ ಸೀಮಿತ ಮೌಲ್ಯವಿದೆ, ನಗರವು ಕೇವಲ ಒಂದು ಚೆಕ್ ಬರೆದುಕೊಟ್ಟರೆ ಸಾಕು” ಎಂದು ಹೇಳಿದ್ದು ಬಾಡಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಬಹಿರಂಗವಾದಾಗ ಭಾರತ ಸರ್ಕಾರ ಸೇರಿದಂತೆ ಜಗತ್ತಿನಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆಡೆರರ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.
ನಗರದ ಅಟಾರ್ನಿ ಎರಿಕಾ ಇವಾನ್ಸ್ ಅವರು ಬುಧವಾರ ಈ ಬಗ್ಗೆ ಹೇಳಿಕೆ ನೀಡಿದ್ದು, “ಜಾನ್ವಿ ಕಂಡುಲ ಅವರ ಸಾವು ಅತ್ಯಂತ ಹೃದಯ ವಿದ್ರಾವಕ. ಈ ಆರ್ಥಿಕ ಪರಿಹಾರವು ಕಂಡುಲ ಕುಟುಂಬಕ್ಕೆ ಸ್ವಲ್ಪ ಮಟ್ಟದ ನೆಮ್ಮದಿ ನೀಡಬಹುದು ಎಂದು ಆಶಿಸುತ್ತೇವೆ. ಜಾನ್ವಿ ಅವರ ಜೀವನ ನಮಗೆ ಮತ್ತು ನಮ್ಮ ಸಮುದಾಯಕ್ಕೆ ಅತ್ಯಂತ ಮೌಲ್ಯಯುತವಾಗಿತ್ತು” ಎಂದು ತಿಳಿಸಿದ್ದಾರೆ. ಈ ಪರಿಹಾರದ ಒಟ್ಟು ಮೊತ್ತದಲ್ಲಿ ಸುಮಾರು 20 ಮಿಲಿಯನ್ ಡಾಲರ್ ಹಣವನ್ನು ವಿಮಾ ಕಂಪನಿಯು ಭರಿಸಲಿದೆ ಎಂದು ವರದಿಯಾಗಿದೆ.
ಈ ಘಟನೆಯ ನಂತರ ಸಿಯಾಟಲ್ ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿತ್ತು. ಘಟನೆಗೆ ಕಾರಣವಾದ ಅಧಿಕಾರಿ ಕೆವಿನ್ ಡೇವಿ ಅವರಿಗೆ ಕೇವಲ 5,000 ಡಾಲರ್ ದಂಡ ವಿಧಿಸಿ ಬಿಡಲಾಗಿತ್ತು, ಇದು ಜನರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತ್ತು. ಈಗ ಬೃಹತ್ ಮೊತ್ತದ ಪರಿಹಾರ ಘೋಷಿಸುವ ಮೂಲಕ ನಗರ ಆಡಳಿತವು ತನ್ನ ತಪ್ಪನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದೆ. ಜಾನ್ವಿ ಕಂಡುಲ ಅವರ ಕುಟುಂಬ ಮತ್ತು ಸ್ನೇಹಿತರು ಈ ಹಣಕಾಸು ಪರಿಹಾರದ ಮೂಲಕ ಪ್ರಕರಣಕ್ಕೆ ಅಂತಿಮ ತೆರೆ ಎಳೆಯಲು ಮುಂದಾಗಿದ್ದಾರೆ.
ಇದನ್ನೂ ಓದಿ : ಮಾವನಿಂದಲೇ ಸೊಸೆಗೆ ಲೈಂಗಿಕ ಕಿರುಕುಳ ಕೇಸ್ | ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಮಹಿಳಾ ಆಯೋಗ ಸೂಚನೆ!



















