ಇಸ್ಲಾಮಾಬಾದ್ : “ಎಲ್ಲವೂ ಮುಗಿದುಹೋಗಿದೆ (It Is Over)” ಎಂಬ ಮೂರು ಪದಗಳ ಶೀರ್ಷಿಕೆಯಡಿ ಪ್ರಕಟವಾದ ಲೇಖನವೊಂದು ಇದೀಗ ಪಾಕಿಸ್ತಾನದ ಆಡಳಿತಾರೂಢರು ಮತ್ತು ಪ್ರಭಾವಿ ಸೇನೆಯ ನಿದ್ದೆಗೆಡಿಸಿದೆ. ಅಮೆರಿಕದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಪಾಕಿಸ್ತಾನಿ ವಿದ್ಯಾರ್ಥಿ ಜೊರೈನ್ ನಿಜಾಮನಿ ಬರೆದ ಈ ಲೇಖನ, ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಡಿಲೀಟ್ ಆಗಿದ್ದರೂ, ಈಗ ಪಾಕಿಸ್ತಾನದ ಯುವಜನತೆಯ ದನಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.
ಲೇಖನ ಡಿಲೀಟ್ ಆಗಿದ್ದೇಕೆ?
ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ನಲ್ಲಿ ಜ.1 ರಂದು ಈ ಲೇಖನ ಪ್ರಕಟವಾಗಿತ್ತು. ಆದರೆ, ಪಾಕಿಸ್ತಾನ ಸೇನೆಯ ಒತ್ತಡಕ್ಕೆ ಮಣಿದು ಪತ್ರಿಕೆಯು ಕೆಲವೇ ಗಂಟೆಗಳಲ್ಲಿ ಈ ಲೇಖನವನ್ನು ತನ್ನ ಜಾಲತಾಣದಿಂದ ತೆಗೆದುಹಾಕಿದೆ ಎಂದು ಆರೋಪಿಸಲಾಗಿದೆ. ಈ ‘ಸೆನ್ಸಾರ್‌ಶಿಪ್’ ಕ್ರಮವೇ ಈಗ ಲೇಖನವನ್ನು ಮತ್ತಷ್ಟು ವೈರಲ್ ಮಾಡಿದ್ದು, ಲೇಖಕ ಜೊರೈನ್ ಅವರನ್ನು ರಾತ್ರೋರಾತ್ರಿ ‘ನ್ಯಾಷನಲ್ ಹೀರೊ’ ಸ್ಥಾನಕ್ಕೆ ಏರಿಸಿದೆ.
ಲೇಖನದಲ್ಲಿ ಅಂಥದ್ದೇನಿದೆ?
ಖ್ಯಾತ ನಟರಾದ ಫಜಿಲಾ ಖಾಜಿ ಮತ್ತು ಕೈಸರ್ ಖಾನ್ ನಿಜಾಮನಿ ಅವರ ಪುತ್ರರಾದ ಜೊರೈನ್ ನಿಜಾಮನಿ ತಮ್ಮ ಲೇಖನದಲ್ಲಿ ಪಾಕಿಸ್ತಾನದ ಹಳೆಯ ತಲೆಮಾರಿನ ಆಡಳಿತಗಾರರಿಗೆ ನೇರ ಎಚ್ಚರಿಕೆ ನೀಡಿದ್ದಾರೆ. “ಶಾಲೆ-ಕಾಲೇಜುಗಳಲ್ಲಿ ಸೆಮಿನಾರ್ ಮಾಡಿ ಬಲವಂತವಾಗಿ ದೇಶಭಕ್ತಿ ತುಂಬುವ ಕಾಲ ಮುಗಿದಿದೆ. ಜನರಿಗೆ ಸಮಾನ ಅವಕಾಶ, ಮೂಲಸೌಕರ್ಯ ಮತ್ತು ಹಕ್ಕುಗಳನ್ನು ನೀಡಿದಾಗ ದೇಶಭಕ್ತಿ ತಾನಾಗಿಯೇ ಬೆಳೆಯುತ್ತದೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇಂದಿನ ಜೆನ್ ಝೆಡ್ ಯುವಜನತೆಗೆ ಇಂಟರ್ನೆಟ್ ಮೂಲಕ ವಾಸ್ತವ ಏನೆಂದು ಗೊತ್ತು. ಆಡಳಿತಗಾರರು ಜನರ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯನ್ನು ಯುವಕರು ಅರ್ಥಮಾಡಿಕೊಂಡಿದ್ದಾರೆ. ನೀವು ಜನರನ್ನು ಅಕ್ಷರಸ್ಥರಾಗದಂತೆ ತಡೆಯಲು ಪ್ರಯತ್ನಿಸಿದರೂ ಸೋತಿದ್ದೀರಿ ಎಂದು ಅವರು ಗುಡುಗಿದ್ದಾರೆ. ಪಾಕಿಸ್ತಾನದಲ್ಲಿ ಸತ್ಯ ಮಾತನಾಡುವವರನ್ನು ಹತ್ತಿಕ್ಕಲಾಗುತ್ತಿದೆ. ಇದರಿಂದ ಬೇಸತ್ತ ಯುವಕರು ಪ್ರತಿಭಟಿಸುವ ಬದಲು ಮೌನವಾಗಿ ದೇಶ ಬಿಟ್ಟು ಹೋಗುತ್ತಿದ್ದಾರೆ. ಇದು ದೇಶದ ಪತನದ ಮುನ್ಸೂಚನೆ ಎಂದು ಲೇಖನದಲ್ಲಿ ವಿವರಿಸಲಾಗಿದೆ.
ಪಾಕಿಸ್ತಾನದಲ್ಲಿ ಲೇಖನಕ್ಕೆ ಭಾರೀ ಬೆಂಬಲ
ಈ ಲೇಖನವನ್ನು ಡಿಲೀಟ್ ಮಾಡಿದ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಜತೆಗೆ ಯುವ ಲೇಖಕನಿಗೆ ಭಾರೀ ಬೆಂಬಲವೂ ವ್ಯಕ್ತವಾಗುತ್ತಿದೆ. “ಜೊರೈನ್ ಲೇಖನ ಸತ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಹಳೆಯ ನಿಯಂತ್ರಣದ ಮಾರ್ಗಗಳು ಈಗ ಕೆಲಸ ಮಾಡುತ್ತಿಲ್ಲ ಎಂಬುದಕ್ಕೆ ಈ ಲೇಖನ ತೆಗೆದುಹಾಕಿರುವುದೇ ಸಾಕ್ಷಿ” ಎಂದು ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ ಟ್ವೀಟ್ ಮಾಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಈ ಕ್ರಮ ಸಂವಿಧಾನ ವಿರೋಧಿ ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಮಂಡಳಿ ಖಂಡಿಸಿದೆ.
ಯಾರೀ ಲೇಖಕ?
ಜೊರೈನ್ ನಿಜಾಮನಿ ಪ್ರಸ್ತುತ ಅಮೆರಿಕದ ಅರ್ಕಾನ್ಸಾಸ್ ವಿಶ್ವವಿದ್ಯಾಲಯದಲ್ಲಿ ಕ್ರಿಮಿನಾಲಜಿ ವಿಷಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ. ಅವರ ಪೋಷಕರು ಪಾಕಿಸ್ತಾನದ ಹೆಸರಾಂತ ನಟರಾಗಿದ್ದರೂ, ಜೊರೈನ್ ತಮ್ಮ ಪ್ರಖರ ಬರವಣಿಗೆಯ ಮೂಲಕ ಇಂದು ಇಡೀ ದೇಶದ ಗಮನ ಸೆಳೆದಿದ್ದಾರೆ. ಒಟ್ಟಾರೆಯಾಗಿ, ಪಾಕಿಸ್ತಾನದ ‘ಝೆಡ್ ಪೀಳಿಗೆ’ ಆಡಳಿತ ವರ್ಗದ ವಿರುದ್ಧ ಸಿಡಿದೆದ್ದಿದೆ ಎಂಬುದಕ್ಕೆ ಈ ಲೇಖನವೇ ಸಾಕ್ಷಿ.
ಇದನ್ನೂ ಓದಿ : ಹುಬ್ಬಳ್ಳಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ಕೇಸ್ | ರಾಷ್ಟ್ರೀಯ ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು!



















