ಪುತ್ತೂರು: ಪುತ್ತೂರಿನ ಮಹಿಳಾ ಪೋಲೀಸ್ ಠಾಣೆ ಅನಧಿಕೃತ ಎನ್ನುವ ಶಾಸಕ ಅಶೋಕ್ ಕುಮಾರ್ ರೈ ಹೇಳಿಕೆ ಶುದ್ಧ ಸುಳ್ಳು ಎಂದು ಪುತ್ತೂರು ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಆರೋಪ ಮಾಡಿದ್ದಾರೆ.
ಮಹಿಳಾ ಠಾಣೆಯ ಅಡಿಸ್ಥಳ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯ ಹೆಸರಿಗೆ ದಾಖಲಾಗಿದ್ದು, ಸರ್ವೆ ನಂಬರ್ 74/8 ರಲ್ಲಿ ಠಾಣೆಯ ಕಟ್ಟಡವಿದೆ. ಆದರೆ ಶಾಸಕರು ರಾಜ್ಯದ ಗೃಹಸಚಿವರಿಗೆ ಠಾಣೆಯ ಕಟ್ಟಡ ಅನಧಿಕೃತ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದಿದ್ದಾರೆ.
ನಮ್ಮ ಮನೆ ಸೇರಿದಂತೆ ದೇವಸ್ಥಾನದ ಆವರಣದಲ್ಲಿದ್ದ ಎಂಟು ಮನೆಗಳನ್ನೂ ಅನಧಿಕೃತ ಎಂದು ನೆಲಸಮ ಮಾಡಿದ್ದಾರೆ. ಆದರೆ ಆ ಮನೆಗಳು ಅನಧಿಕೃತ ಆಗಿರಲಿಲ್ಲ, ದೇವಸ್ಥಾನದ ನಿತ್ಯ ಕರ್ಮ ಮಾಡುವವರಿಗೆ ಆ ಸ್ಥಳವನ್ನು ಬಾಡಿಗೆ ರೂಪದಲ್ಲಿ ನೀಡಲಾಗಿತ್ತು. ಇದೀಗ ಮಹಿಳಾ ಠಾಣೆಯನ್ನೂ ಕೂಡ ಅನಧಿಕೃತ ಎಂದು ಕೆಡವಲು ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸ್ಥಳ ಬಾಡಿಗೆಯ ರೂಪದಲ್ಲಿ ಮನೆಯಲ್ಲಿದ್ದವರನ್ನು ದೇವರ ಪ್ರಸಾದ ನೀಡಿ ಹೊರದಬ್ಬಲಾಗಿತ್ತು. ಆ ಸ್ಥಳದಲ್ಲಿ ಎಂಟು ಕುಟುಂಬಗಳ ಕಣ್ಣೀರಿನ ಶಾಪ ಇಂದಿಗೂ ಇದೆ. ದೇವಸ್ಥಾನವನ್ನು ಪ್ರವಾಸಿ ತಾಣ ಮಾಡುವುದಾಗಿ ಶಾಸಕರು ಹೇಳುತ್ತಿದ್ದಾರೆ. ಆದರೆ ಮಹಾಲಿಂಗೇಶ್ವರ ದೇವಸ್ಥಾನವನ್ನು ಶ್ರದ್ಧಾಕೇಂದ್ರವನ್ನಾಗಿಯೇ ಉಳಿಸಿ. ಅದನ್ನು ಪ್ರವಾಸಿ ಕೇಂದ್ರವಾಗಿ ಮಾಡಲು ದೇವಸ್ಥಾನ ಮೈಸೂರು ಅರಮನೆಯಲ್ಲ ಎಂದು ಹೇಳಿದ್ದಾರೆ.