ಜೆರುಸಲೇಂ: ಯುದ್ಧ ಪೀಡಿತ ಗಾಜಾದ ಮೇಲೆ ಇಸ್ರೇಲ್ ದಾಳಿ ನಡೆಸಿ ಕನಿಷ್ಠ 5 ಮಂದಿ ಅಲ್ ಜಜೀರಾ ಪತ್ರಕರ್ತರನ್ನು ಹತ್ಯೆಗೈದಿದೆ. ಮೃತ ಪತ್ರಕರ್ತರಲ್ಲಿ ಅನಾಸ್ ಅಲ್-ಶರೀಫ್, ಮೊಹಮ್ಮದ್ ಖ್ರೈಖೆ, ಹಾಗೂ ಕ್ಯಾಮರಾಮನ್ ಗಳಾದ ಇಬ್ರಾಹಿಂ ಜಾಹರ್, ಮೊಹಮ್ಮದ್ ನೌಫಲ್ ಮತ್ತು ಮೋಮೆನ್ ಅಲಿವಾ ಸೇರಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ. ಅಲ್-ಶಿಫಾ ಆಸ್ಪತ್ರೆಯ ಮುಖ್ಯ ದ್ವಾರದ ಬಳಿ ಪತ್ರಕರ್ತರಿಗಾಗಿ ಹಾಕಲಾಗಿದ್ದ ಡೇರೆ ಮೇಲೆ ಇಸ್ರೇಲ್ ದಾಳಿ ನಡೆಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ನಾವು ಅನಾಸ್ ಅಲ್-ಶರೀಫ್ ಅವರನ್ನು ಗುರಿಯಾಗಿಸಿಯೇ ಈ ದಾಳಿ ನಡೆಸಿದ್ದೇವೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. ಅಲ್ಲದೇ, ಶರೀಫ್ ಅವರನ್ನು “ಭಯೋತ್ಪಾದಕ” ಎಂದೂ ಕರೆದಿದೆ. ಅಲ್-ಶರೀಫ್ ಹಮಾಸ್ ಭಯೋತ್ಪಾದಕ ಸಂಘಟನೆಯಲ್ಲಿ ಭಯೋತ್ಪಾದಕ ಘಟಕದ ಮುಖ್ಯಸ್ಥನಾಗಿದ್ದ ಮತ್ತು ಇಸ್ರೇಲ್ ನಾಗರಿಕರು ಮತ್ತು ಐಡಿಎಫ್ ಪಡೆಗಳ ವಿರುದ್ಧ ರಾಕೆಟ್ ದಾಳಿಗಳನ್ನು ನಡೆಸಲು ಕಾರಣನಾಗಿದ್ದ ಎಂದು ಇಸ್ರೇಲ್ ಆರೋಪಿಸಿದೆ. ಆದಾಗ್ಯೂ, ಅಲ್ ಜಜೀರಾ ಮತ್ತು ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ (CPJ) ಇಸ್ರೇಲ್‌ನ ಈ ಆರೋಪಗಳನ್ನು ನಿರಾಕರಿಸಿವೆ ಮತ್ತು ಅಲ್-ಶರೀಫ್ ಒಬ್ಬ ಪತ್ರಕರ್ತ ಎಂದು ಹೇಳಿವೆ.
ಅನಾಸ್ ಅಲ್-ಶರೀಫ್ ಅವರು ಗಾಜಾದಲ್ಲಿ ಅಲ್ ಜಜೀರಾದ ಜನಪ್ರಿಯ ವರದಿಗಾರರಾಗಿದ್ದರು ಮತ್ತು ದೈನಂದಿನ ವರದಿಗಳನ್ನು ನೀಡುತ್ತಿದ್ದರು. ಅವರ ಸಾವಿಗೆ ಕೆಲವೇ ಕ್ಷಣಗಳ ಮೊದಲು, ಅವರು ಟ್ವಿಟರ್ ನಲ್ಲಿ ಗಾಜಾ ನಗರದಲ್ಲಿ ಇಸ್ರೇಲ್ ಬಾಂಬ್ ದಾಳಿ ತೀವ್ರಗೊಂಡ ಬಗ್ಗೆ ಪೋಸ್ಟ್ ಮಾಡಿದ್ದರು. ಅವರ ಸಾವಿನ ನಂತರ, ಅವರ ಖಾತೆಯಿಂದ ಒಂದು ಪೋಸ್ಟ್ ಪ್ರಕಟವಾಗಿದ್ದು, ಅದರಲ್ಲಿ “ನನ್ನ ಈ ಮಾತುಗಳು ನಿಮ್ಮನ್ನು ತಲುಪಿದರೆ, ಇಸ್ರೇಲ್ ನನ್ನನ್ನು ಕೊಲ್ಲುವಲ್ಲಿ ಮತ್ತು ನನ್ನ ಧ್ವನಿಯನ್ನು ಅಡಗಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಯಿರಿ” ಎಂದು ಬರೆಯಲಾಗಿತ್ತು.
ಪತ್ರಕರ್ತರ ಸಂರಕ್ಷಣಾ ಸಮಿತಿ(ಸಿಪಿಜೆ) ಈ ದಾಳಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಪತ್ರಕರ್ತರನ್ನು ಭಯೋತ್ಪಾದಕರೆಂದು ಹಣೆಪಟ್ಟಿ ಕಟ್ಟುವ ಇಸ್ರೇಲ್‌ನ ಪ್ರವೃತ್ತಿ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಹೇಳಿದೆ. ಅಕ್ಟೋಬರ್ 2023 ರಲ್ಲಿ ಇಸ್ರೇಲ್‌ನಮಿಲಿಟರಿ ಕಾರ್ಯಾಚರಣೆಗಳು ಪ್ರಾರಂಭವಾದಾಗಿನಿಂದ ಗಾಜಾದಲ್ಲಿ ಒಟ್ಟು 186 ಪತ್ರಕರ್ತರು ಸಾವನ್ನಪ್ಪಿದ್ದಾರೆ ಎಂದು ಸಿಪಿಜೆ ತಿಳಿಸಿದೆ. ಇಸ್ರೇಲ್ ಮತ್ತು ಅಲ್ ಜಜೀರಾ ನಡುವೆ ಹಲವು ವರ್ಷಗಳಿಂದ ವಿವಾದಾತ್ಮಕ ಸಂಬಂಧವಿದೆ, ಇಸ್ರೇಲ್ ಅಲ್ ಜಜೀರಾ ಪ್ರಸಾರವನ್ನು ನಿಷೇಧಿಸಿದೆ ಮತ್ತು ಅದರ ಕಚೇರಿಗಳ ಮೇಲೆಯೂ ದಾಳಿ ಮಾಡಿದೆ.