ಜೆರುಸಲೇಂ: 2023ರ ಅಕ್ಟೋಬರ್ 7ರಂದು ನಡೆದ ಹಮಾಸ್ ದಾಳಿಯ ಸಂದರ್ಭದಲ್ಲಿ ಉಂಟಾದ ಗಂಭೀರ ಗುಪ್ತಚರ ವೈಫಲ್ಯದಿಂದ ಪಾಠ ಕಲಿತಿರುವ ಇಸ್ರೇಲಿ ರಕ್ಷಣಾ ಪಡೆ, ಈಗ ತನ್ನ ಗುಪ್ತಚರ ವಿಭಾಗಕ್ಕೆ ಮಹತ್ವದ ಸುಧಾರಣೆಗಳನ್ನು ತಂದಿದೆ. ಇದರ ಅಡಿಯಲ್ಲಿ, ಗುಪ್ತಚರ ವಿಭಾಗದ ಎಲ್ಲಾ ಸೈನಿಕರು ಮತ್ತು ಅಧಿಕಾರಿಗಳಿಗೆ ಇಸ್ಲಾಂ ಧರ್ಮದ ಅಧ್ಯಯನ ಮತ್ತು ಅರೇಬಿಕ್ ಭಾಷಾ ತರಬೇತಿಯನ್ನು ಕಡ್ಡಾಯಗೊಳಿಸಲಾಗಿದೆ.
ಇಸ್ರೇಲ್‌ನ ಮಿಲಿಟರಿ ಗುಪ್ತಚರ ನಿರ್ದೇಶನಾಲಯದ (AMAN) ಮುಖ್ಯಸ್ಥ ಮೇಜರ್ ಜನರಲ್ ಶ್ಲೋಮಿ ಬೈಂಡರ್ ಅವರು ಈ ಆದೇಶ ಹೊರಡಿಸಿದ್ದಾರೆ. ಈ ಹೊಸ ತರಬೇತಿ ನೀತಿಯು ಗುಪ್ತಚರ ಸಿಬ್ಬಂದಿಯ ವಿಶ್ಲೇಷಣಾತ್ಮಕ ಸಾಮರ್ಥ್ಯಗಳನ್ನು ಬಲಪಡಿಸುವ ಮತ್ತು ಸಾಂಸ್ಕೃತಿಕ ತಿಳುವಳಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಆದೇಶಗಳೇನು?:
ಕಡ್ಡಾಯ ಅಧ್ಯಯನ: ಮುಂದಿನ ವರ್ಷದ ಅಂತ್ಯದೊಳಗೆ, ಇಸ್ರೇಲ್‌ನ ಮಿಲಿಟರಿ ಗುಪ್ತಚರ ನಿರ್ದೇಶನಾಲಯದ ಪ್ರತಿಯೊಬ್ಬ ಸಿಬ್ಬಂದಿಗೆ ಇಸ್ಲಾಂ ಧರ್ಮದ ಅಧ್ಯಯನದ ಬಗ್ಗೆ ತರಬೇತಿ ನೀಡಲಾಗುವುದು ಮತ್ತು ಶೇ.50ರಷ್ಟು ಸಿಬ್ಬಂದಿಗೆ ಅರೇಬಿಕ್ ಭಾಷಾ ತರಬೇತಿ ನೀಡಲಾಗುವುದು. ತಾಂತ್ರಿಕ ಮತ್ತು ಸೈಬರ್ ಘಟಕಗಳಲ್ಲಿರುವ ಸೈನಿಕರಿಗೂ ಈ ತರಬೇತಿಯನ್ನು ಇದೇ ಮೊದಲ ಬಾರಿಗೆ ಕಡ್ಡಾಯಗೊಳಿಸಲಾಗಿದೆ.
ಭಾಷಾ ಪ್ರಾವೀಣ್ಯತೆ: ಭವಿಷ್ಯದ ಕಮಾಂಡರ್‌ಗಳು ಅರೇಬಿಕ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವುದನ್ನು ಮತ್ತು ಇಸ್ಲಾಮಿಕ್ ಸಂಸ್ಕೃತಿಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದುವುದನ್ನು ಖಚಿತಪಡಿಸಿಕೊಳ್ಳುವುದು ಈ ಯೋಜನೆಯ ದೀರ್ಘಕಾಲೀನ ಗುರಿಯಾಗಿದೆ.
ವಿಶೇಷ ಉಪಭಾಷೆಗಳಿಗೆ ಒತ್ತು: ಹೌತಿ ಮತ್ತು ಇರಾಕಿ ಅರೇಬಿಕ್ ಉಪಭಾಷೆಗಳ ಮೇಲೆ ವಿಶೇಷ ಗಮನಹರಿಸಲು ನಿರ್ಧರಿಸಲಾಗಿದೆ. ಏಕೆಂದರೆ, ಹೌತಿ ಬಂಡುಕೋರರ ಸಂವಹನವನ್ನು ಅರ್ಥೈಸಿಕೊಳ್ಳುವಲ್ಲಿ ಗುಪ್ತಚರ ಸಿಬ್ಬಂದಿ ಈ ಹಿಂದೆ ತೊಂದರೆ ಎದುರಿಸಿದ್ದರು. ಮುಂದೆ ಹಾಗಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶ.
ಪ್ರತ್ಯೇಕ ವಿಭಾಗ ಸ್ಥಾಪನೆ: ಇಸ್ಲಾಂ ಮತ್ತು ಅರೇಬಿಕ್ ಭಾಷೆಗಳನ್ನು ಕಲಿಸಲು ತರಬೇತಿ ವ್ಯವಸ್ಥೆಯೊಳಗೆ ಒಂದು ಪ್ರತ್ಯೇಕ ವಿಭಾಗವನ್ನು ಸ್ಥಾಪಿಸಲಾಗುವುದು.
ಬದಲಾವಣೆಗೆ ಕಾರಣವೇನು?
“ಇಲ್ಲಿಯವರೆಗೆ, ನಾವು ಸಂಸ್ಕೃತಿ, ಭಾಷೆ ಮತ್ತು ಇಸ್ಲಾಂ ವಿಚಾರದಲ್ಲಿ ನೈಪುಣ್ಯತೆ ಹೊಂದಿರಲಿಲ್ಲ. ನಾವು ಈ ಕ್ಷೇತ್ರಗಳಲ್ಲಿ ಸುಧಾರಣೆ ಆಗಬೇಕಿರುವುದು ಬಹು ಮುಖ್ಯ ಎಂದು ಹಿರಿಯ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾಷೆ ಮತ್ತು ಸಂಸ್ಕೃತಿಯ ಅಧ್ಯಯನದ ಮೂಲಕ, ನಾವು ನಮ್ಮ ಗುಪ್ತಚರ ಅಧಿಕಾರಿಗಳು ಮತ್ತು ಸೈನಿಕರನ್ನು ಇನ್ನಷ್ಟು ನಿಪುಣರನ್ನಾಗಿಸಬಹುದು ಎಂದು ಅವರು ಹೇಳಿದ್ದಾರೆ.
ಬಜೆಟ್ ಕಡಿತದಿಂದಾಗಿ ಆರು ವರ್ಷಗಳ ಹಿಂದೆ ಮುಚ್ಚಲಾಗಿದ್ದ, ಶಾಲೆಗಳಲ್ಲಿ ಅರೇಬಿಕ್ ಮತ್ತು ಮಧ್ಯಪ್ರಾಚ್ಯ ಅಧ್ಯಯನಗಳನ್ನು ಉತ್ತೇಜಿಸುತ್ತಿದ್ದ ಟೆಲೆಮ್ (TELEM) ವಿಭಾಗವನ್ನು ಸಹ ಮತ್ತೆ ತೆರೆಯಲಾಗುತ್ತಿದೆ. ಈ ಮೂಲಕ, ರಕ್ಷಣಾ ಪಡೆ, ಗುಪ್ತಚರ ಪಡೆ ಸೇರ್ಪಡೆಗೂ ಮುನ್ನವೇ ವಿದ್ಯಾರ್ಥಿ ಹಂತದಲ್ಲೇ ಅರೇಬಿಕ್ ಮತ್ತು ಮಧ್ಯಪ್ರಾಚ್ಯ ಅಧ್ಯಯನಗಳನ್ನು ಬಲಪಡಿಸುವ ಗುರಿ ಹೊಂದಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.