ಜೆರುಸಲೇಂ: ಪ್ಯಾಲೆಸ್ತೀನ್ ನ ಗಾಜಾಪಟ್ಟಿ ಮೇಲೆ ಇಸ್ರೇಲ್ ಭೀಕರ ದಾಳಿ (Israel Airstrike) ಮುಂದುವರಿಸಿದ್ದು, ಹಮಾಸ್ ಉಗ್ರ ಸಂಘಟನೆಯ ರಾಜಕೀಯ ವಿಭಾಗದ ನಾಯಕ ಸಲಾಹ್ ಅಲ್ ಬರ್ದಾವೀಲ್ ಎಂಬಾತನನ್ನು ಹತ್ಯೆ ಮಾಡಲಾಗಿದೆ. ಸಲಾಹ್ ಅಲ್ ಬರ್ದಾವೀಲ್ ನಿವಾಸದ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ. ದಾಳಿಯಲ್ಲಿ ಹಮಾಸ್ ನಾಯಕನ ಪತ್ನಿ ಕೂಡ ಹತರಾಗಿದ್ದಾರೆ ಎಂದು ತಿಳಿದುಬಂದಿದೆ.
ಗಾಜಾ ನಗರದ ಖಾನ್ ಯೂನಿಸ್ ನಗರದ ಮೇಲೆ ವಾಯುದಾಳಿ ನಡೆಸಿರುವ ಕುರಿತು ಇಸ್ರೇಲ್ ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ, ಸಲಾಹ್ ಅಲ್ ಬರ್ದಾವೀಲ್ ಹತನಾಗಿರುವ ಕುರಿತು ಹಮಾಸ್ ಉಗ್ರ ಸಂಘಟನೆಯ ಮಾಧ್ಯಮ ಸಲಹೆಗಾರನಾದ ತಾಹೆರ್ ಅಲ್ ನೋನೊ ಎಂಬಾತನು ಮಾಹಿತಿ ಹಂಚಿಕೊಂಡಿದ್ದಾನೆ. ಅಲ್ಲದೆ, ಸಲಾಹ್ ಅಲ್ ಬರ್ದಾವೀಲ್ ಸಾವಿಗೆ ಸಂತಾಪ ಸೂಚಿಸಿದ್ದಾನೆ. ಸಲಾಹ್ ಅಲ್ ಬರ್ದಾವೀಲ್ ಹಾಗೂ ಆತನ ಪತ್ನಿಯು ಪ್ರಾರ್ಥನೆ ಮಾಡುವಾಗಲೇ ಹತ್ಯೆ ಮಾಡಲಾಗಿದೆ ಎಂದು ಕೂಡ ಹೇಳಿದ್ದಾನೆ.
ಕಳೆದ ಎರಡು ತಿಂಗಳಿನಿಂದ ಗಾಜಾ ನಗರದಲ್ಲಿ ಸ್ವಲ್ಪ ಶಾಂತಿ ನೆಲೆಸಿತ್ತು. ಅಮೆರಿಕದ ಮಧ್ಯಪ್ರವೇಶದ ಬಳಿಕ ಶಾಂತಿಸ್ಥಾಪನೆಯ ಮಾತುಕತೆ ನಡೆದಿತ್ತು. ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಉಗ್ರರು ಕೂಡ ಒಪ್ಪಿಕೊಂಡಿದ್ದರು. ಆದರೆ, ಹಮಾಸ್ ಉಗ್ರರು ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದ ಇಸ್ರೇಲ್ ಈಗ ಮತ್ತೆ ಗಾಜಾ ನಗರದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ.
ಒತ್ತೆಯಾಳುಗಳನ್ನು ಬಿಡುತ್ತೇವೆ ಎಂದು ಹಮಾಸ್ ಉಗ್ರರು ಹೇಳುತ್ತಿದ್ದಾರೆ. ಆದರೆ, ಹಮಾಸ್ ಉಗ್ರರು ಬಿಡುಗಡೆ ಮಾಡುತ್ತಿಲ್ಲ ಎಂದು ಇಸ್ರೇಲ್ ಆರೋಪಿಸುತ್ತಿದ್ದಾರೆ. ಕದನವಿರಾಮ ಮಾಡಿಕೊಳ್ಳುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಣೆ ಮಾಡಿದ್ದು, ಹಮಾಸ್ ಮಿಲಿಟರಿಯನ್ನು ನಾಶಪಡಿಸದೆ ಬಿಡುವುದಿಲ್ಲ ಎಂದು ಕೂಡ ಹೇಳಿದ್ದಾರೆ.