ಭಾರತ ಕ್ರಿಕೆಟ್ ತಂಡ 2 ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಅವರ ಶ್ರಮ ದೊಡ್ಡದಿದೆ. ಇತ್ತೀಚೆಗಷ್ಟೇ ಲೆಜೆಂಡ್ ಆಟಗಾರರ ಕಪ್ ಗೆದ್ದಿರುವ ಭಾರತ ತಂಡದ ನಾಯಕ ಯುವರಾಜ್ ಸಿಂಗ್, ಈಗ ಐಪಿಎಲ್ ನಲ್ಲಿ ಮತ್ತೆ ಮಿಂಚಲು ಮುಂದಾಗಿದ್ದಾರೆ.
ಸದ್ಯದ ಮಾಹಿತಿಯಂತೆ ಯುವರಾಜ್ ಸಿಂಗ್ ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್ ಆಗಬಹುದು ಎನ್ನಲಾಗುತ್ತಿದೆ. ಗುಜರಾತ್ ಟೈಟಾನ್ಸ್ ತಂಡದ ಹಾಲಿ ಕೋಚ್ ಆಶಿಶ್ ನೆಹ್ರಾ ಮತ್ತು ನಿರ್ದೇಶಕ ವಿಕ್ರಮ್ ಸೋಲಂಕಿ, ಐಪಿಎಲ್ ಹರಾಜಿಗೂ ಮುನ್ನ ತಂಡ ತೊರೆಯಬಹುದು ಎನ್ನಲಾಗುತ್ತಿದೆ. ಹೀಗಾಗಿ ಟೈಟಾನ್ಸ್ ಮ್ಯಾನೇಜ್ ಮೆಂಟ್ ಯುವರಾಜ್ ಸಿಂಗ್ ಅವರನ್ನು ಸಂಪರ್ಕಿಸಿದೆ ಎಂದು ತಿಳಿದು ಬಂದಿದೆ.
ಯುವರಾಜ್ ಸಿಂಗ್ ವಿಶ್ವದಾದ್ಯಂತ ನಿವೃತ್ತ ಆಟಗಾರರ ಲೀಗ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಈಗ ಅವರು ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. ಐಪಿಎಲ್‌ನಲ್ಲಿ 132 ಪಂದ್ಯಗಳನ್ನಾಡಿರುವ ಯುವರಾಜ್ 2750 ರನ್ ಗಳಿಸಿದ್ದಾರೆ. ಇದರಲ್ಲಿ 13 ಅರ್ಧಶತಕಗಳೂ ಸೇರಿವೆ. ಯುವರಾಜ್ ಪಂಜಾಬ್, ಹೈದರಾಬಾದ್, ಪುಣೆ ವಾರಿಯರ್ಸ್, ಆರ್‌ಸಿಬಿ, ಮುಂಬೈ ಇಂಡಿಯನ್ಸ್ ತಂಡಗಳಲ್ಲಿ ಕಾಣಿಸಿಕೊಂಡಿದ್ದರು.
ಗುಜರಾತ್ ಟೈಟಾನ್ಸ್ ಪ್ರತಿ ಸೀಸನ್ಗೆ ಹಾಲಿ ಕೋಚ್ ಆಶಿಶ್ ನೆಹ್ರಾಗೆ 3.5 ಕೋಟಿ ರೂ. ಸಂಭಾವನೆ ನೀಡುತ್ತಿದೆ. ಇದೀಗ ಯುವರಾಜ್ ಈ ಸ್ಥಾನಕ್ಕೆ ಬಂದರೆ ಅವರ ವೇತನದ ಗಾತ್ರ ಹೆಚ್ಚಬಹುದು ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಭಾರತ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದಿರುವ ರಾಹುಲ್ ದ್ರಾವಿಡ್ ಕೂಡ ರಾಜಸ್ಥಾನ್ ರಾಯಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಬಹುದು ಎನ್ನಲಾಗುತ್ತಿದೆ.
ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಇದೀಗ ಅವರ ಸ್ಥಾನಕ್ಕೆ ದ್ರಾವಿಡ್ ಆಯ್ಕೆಯಾಗಬಹುದು ಎನ್ನಲಾಗುತ್ತಿದೆ.