ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸಿದ್ದ ಕ್ಷೇತ್ರ ಬಾದಮಿಯ ಸರ್ಕಾರಿ ಕಚೇರಿಯಲ್ಲಿ ಇದೆಂಥಾ ಅವ್ಯವಸ್ಥೆ? ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಜಿಲ್ಲೆಯ ಬಾದಾಮಿ ತಾಲೂಕು ಆಡಳಿತ ಭವನದಲ್ಲಿ ಮಳೆ ಬಂದರೆ ಸಾಕು ನೀರು ತೊಟ್ಟಿಕ್ಕುತ್ತದೆ. ಮಳೆ ನೀರಿನಿಂದಾಗಿ ಫೈಲ್ ಗಳನ್ನು ರಕ್ಷಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ರಕ್ಷಿಸುವುದಕ್ಕಾಗಿ ರಟ್ಟುಗಳನ್ನು ಬಳಕೆ ಮಾಡಲಾಗುತ್ತಿದೆ. ಓಡಾಡುವ ಜಾಗದಲ್ಲಿ ನಿಂತ ನೀರು ಇಂಗಿಸಲು ತಹಸೀಲ್ದಾರ್ ಕಚೇರಿ ತುಂಬ ಗೋಣಿ ಚೀಲವನ್ನು ಹಾಕಲಾಗಿದೆ.
ಇಷ್ಟೊಂದು ಅವ್ಯವಸ್ಥೆ ಕಂಡು ಜನರು ಛೀಮಾರಿ ಹಾಕುತ್ತಿದ್ದರೆ, ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಇಲ್ಲಿನ ಶಾಸಕ ಭೀಮಸೇನ ಚಿಮ್ಮನಕಟ್ಟಿ. ಇನ್ನು ಇದೆಲ್ಲಾ ನೋಡುತ್ತಿದ್ದರೆ ಸರ್ಕಾರದ ಕಚೇರಿ ಕಟ್ಟಡ ದುರಸ್ಥಿಗೆ ಸರ್ಕಾರದ ಬಳಿ ದುಡ್ಡು ಇಲ್ವಾ ಎಂಬಂತಹ ಪ್ರಶ್ನೆ ಮೂಡುತ್ತಿದೆ. ಅಲ್ಲದೆ 2018 ರಿಂದ 2023ರ ವರೆಗೆ ಸಿಎಂ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಶಾಸಕರಾಗಿದ್ದ ಕ್ಷೇತ್ರದಲ್ಲೇ ಈ ಅವ್ಯವಸ್ಥೆ ಇದೆ ಎಂದು ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.