ಬೆಂಗಳೂರು: ಬಿಬಿಎಂಪಿ ಬಜೆಟ್ ನಾಳೆ ಮಂಡನೆಯಾಗಲಿದ್ದು, ಈ ಮಧ್ಯೆ ಸಾರ್ವಜನಿಕರಲ್ಲಿ ಸಂಶಯವೊಂದು ಮೂಡುತ್ತಿದೆ. ಅಲ್ಲದೇ, ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.
ಬಜೆಟ್ ಗೂ ಮುನ್ನ ಪಾಲಿಕೆಯ ಖಜಾನೆ ಖಾಲಿ ಅಯ್ತಾ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಪಾಲಿಕೆಯ ಸಿಬ್ಬಂದಿಗಳಿಗೆ ವೇತನ ಕೊಡುವುದಕ್ಕೂ ಪಾಲಿಕೆಯ ಖಜಾನೆಯಲ್ಲಿ ಹಣ ಇಲ್ಲ ಎಂಬ ಆರೋಪ ಕೇಳಿ ಬಂದಿದೆ. ಈಗಾಗಲೇ 212 ಹೆಲ್ತ್ ಇನ್ ಸ್ಪೆಕ್ಟರ್ ಗಳಿಗೆ 8 ತಿಂಗಳುಗಳಿಂದ ವೇತನ ನೀಡಿಲ್ಲ. ಇನ್ನೊಂದೆಡೆ ಸ್ಮಶಾನ ಕಾಯುವ ಸಿಬ್ಬಂದಿಗಳಿಗೂ ವೇತನ ನೀಡಿಲ್ಲ ಎನ್ನಲಾಗಿದೆ. ಕಳೆದ ನಾಲ್ಕು ತಿಂಗಳುಗಳಿಂದ ಸ್ಮಶಾನ ಕಾಯುವ 56 ಸಿಬ್ಬಂದಿಗಳಿಗೆ ವೇತನ ನೀಡಿಲ್ಲ ಎಂದು ತಿಳಿದು ಬಂದಿದೆ.
ಹೆಣ ಸುಡುವ ಸಿಬ್ಬಂದಿಗಳಿಗೂ ಸಂಬಳ ಕೊಡಲು ಬಿಬಿಎಂಪಿಗೆ ಆಗುತ್ತಿಲ್ಲವೇ? ಪಾಲಿಕೆಯ ರುದ್ರ ಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಕೊಡುವಷ್ಟೂ ಹಣ ಪಾಲಿಕೆಯಲ್ಲಿ ಇಲ್ಲವಾಯಿತೇ? ಕಾಮಗಾರಿಗಳಿಗೆ ಅಂತಾ ಸಾವಿರಾರು ಕೋಟಿ ರೂ. ಹಣ ಬಿಡುಗಡೆ ಮಾಡುತ್ತದೆ. ಆದರೆ, ಸ್ಮಶಾನ ಕಾಯುವವರಿಗೆ ಬಿಬಿಎಂಪಿ ಬಳಿ ಹಣ ಇಲ್ಲವಾಯಿತೇ? ಎಂದು ಪ್ರಶ್ನಿಸುತ್ತಿರುವ ಜನರು, ಕಾಮಗಾರಿಗಳಿಗೆ ಹಣ ರಿಲೀಸ್ ಮಾಡಿದರೆ ಕಮಿಷನ್ ಬರುತ್ತದೆ. ಅದರೆ, ಸ್ಮಶಾನ ಕಾಯುವ ಬಡ ಕುಟುಂಬಗಳಿಗೆ ಸಂಬಳ ಕೊಟ್ಟರೆ ನಯಾಪೈಸೆ ಕಮಿಷನ್ ಸಿಗುವುದಿಲ್ಲ ಅಂತಾ ಈ ರೀತಿ ಮಾಡುತ್ತಿದ್ದಿರಾ? ಎಂದು ಪ್ರಶ್ನಿಸಿ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.