ಹೋದ್ಯ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಎನ್ನುವಂತಾಗಿದೆ ಈ ಮಹಾಮಾರಿ ಪ್ರವರ. ಹೌದು. ಸಮಸ್ತ ಜಗತ್ತನ್ನೇ ಸ್ತಬ್ಧಗೊಳಿಸಿದ್ದ ಡೆಡ್ಲಿ ಕೋವಿಡ್ ಮತ್ತೆ ಪ್ರತ್ಯಕ್ಷವಾಗಿದೆ. ಸದ್ಯಕ್ಕೆ ಆತಂಕವಿಲ್ಲದಿದ್ರೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರ್ತಿರೋದು ಕೆಲ ಮುನ್ನೆಚ್ಚರಿಕೆ ಅಗತ್ಯ ಅನ್ನೋ ಕರೆ ಗಂಟೆ ಬಾರಿಸ್ತಿದೆ. ಕರ್ನಾಟಕದಲ್ಲಿ ಕೊರೋನಾ ಆರ್ಭಟ ಪ್ರತಿ ದಿನ ಏರುಮುಖದಲ್ಲೇ ಸಾಗ್ತಿರೋದು ನಿಜಕ್ಕೂ ಆತಂಕಕಾರಿ.

ದೇಶದಲ್ಲಿ ಜಾರಿಯಾಗಲಿದೆಯಾ ಮತ್ತೆ ಕಠಿಣ ನಿಯಮ…?
ಸಾವಿರಾರು ಜನರ ಜೀವಕ್ಕೇ ಸಂಚಕಾರ ತಂದ ಕೋವಿಡ್ ಮತ್ತೆ ಪುನರಾವರ್ತನೆಯಾಗ್ತಿದೆ. ಆಘಾತ ಎನ್ನುವಂತೆ ಭಾರತದಲ್ಲಿ ನಿತ್ಯ ಕೋವಿಡ್ ಪೀಡಿತರ ಸಂಖ್ಯೆ ಏರುತ್ತಲೇ ಸಾಗಿದೆ. ನಿನ್ನೆವರೆಗೂ ದೇಶದಲ್ಲಿ 1009 ಪಾಸಿಟಿವ್ ಕೇಸ್ ಗಳು ದಾಖಲಾಗಿವೆ. ಈ ಪೈಕಿ ಅತಿ ಹೆಚ್ಚು ಕೇರಳದಲ್ಲಿ ಕಂಡುಬಂದಿವೆ. ದೇವರ ಸ್ವಂತ ನಾಡಿನಲ್ಲಿ ನಿನ್ನೆವರೆಗೂ 430 ಪ್ರಕರಣಗಳು ಬೆಳಕಿಗೆ ಬಂದಿವೆ. ಉಳಿದಂತೆ ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರವಿದ್ದು ಇಲ್ಲಿ 209 ಪ್ರಕರಣಗಳಿದ್ರೆ, ಮೂರನೇ ಸ್ಥಾನದಲ್ಲಿರುವ ದೆಹಲಿಯಲ್ಲಿ 104 ಕೇಸ್ ಗಳಿವೆ. ನಾಲ್ಕನೇ ಸ್ಥಾನದಲ್ಲಿರೋ ಕರ್ನಾಟಕ ಈವರೆಗೂ 46 ಕೋವಿಡ್ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ನಿತ್ಯ ಇದೇ ವೇಗದಲ್ಲಿ ಮಾರಿ ಆರ್ಭಟಿಸುತ್ತಾ ಸಾಗಿದ್ರೆ, ಮತ್ತೆ ಕಠಿಣ ನಿಯಮಗಳು ದೇಶದಲ್ಲಿ ಜಾರಿಯಾಗುತ್ತಾ ಅನ್ನೋ ಪ್ರಶ್ನೆ ಮೂಡಿಸಿದೆ.
ಮಾಸ್ಕ್ ಹಾಕಿ ಹೊರಬರುವಂತೆ ಸಿಎಂ ಸೂಚನೆ
ಹಾಗೆ ನೋಡಿದ್ರೆ ಕರ್ನಾಟಕದಲ್ಲಿ ಕೋವಿಡ್ ನಿಧಾನಕ್ಕೆ ವ್ಯಾಪಿಸುತ್ತಲೇ ಸಾಗ್ತಿದೆ. ಅದ್ರಲ್ಲೂ ಬೆಂಗಳೂರು ನಗರವೇ ಮಹಾಮಾರಿಯ ತಾಣವಾಗ್ತಿರೋದು ನಿಜಕ್ಕೂ ಭೀತಿ ಹೆಚ್ಚಿಸಿದೆ. ಆ ಬಾರಿಯ ಕೋವಿಡ್ ಗೆ ಬೆಂಗಳೂರಿನಲ್ಲೇ ಮೊದಲ ಸಾವು ಸಂಭವಿಸಿರೋದು ಮತ್ತಷ್ಟು ಆಘಾತಕಾರಿ. 85 ವರ್ಷದ ವೃದ್ಧರೊಬ್ಬರು ಕೋವಿಡ್ ಗೆ ಬಲಿಯಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕೂಡಾ ತುರ್ತು ಸಭೆ ನಡೆಸಿ ಮುಂದಿನ ನಡೆಗಳ ಬಗ್ಗೆ ಚರ್ಚಿಸಿದ್ದಾರೆ. ಅಷ್ಟೇ ಅಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿಗೆ ಮುಂದೆ ಎಂಥದ್ದೇ ಸಂದರ್ಭ ಬಂದ್ರೂ ಎದುರಿಸಲು ಸಜ್ಜಾಗಿರುವಂತೆ ಕರೆ ನೀಡಿದ್ದಾರೆ. ಔಷಧಿ, ವೆಂಟಿಲೇಟರ್ ಸೇರಿ ಎಲ್ಲ ಅಗತ್ಯ ಕ್ರಮಗಳನ್ನು ಸಮರ ಸನ್ನದ್ಧವಾಗಿರಿಸುವುಂತೆ ಸೂಚಿಸಿದ್ದರೆ. ಅಷ್ಟೇ ಅಲ್ಲಾ ವೃದ್ಧರು, ಗರ್ಭಿಣಿಯರಪು ವಿನಾಕಾರಣ ಮನೆಯಿಂದ ಹೊರಬಾರದಂತೆ ಸಲಹೆ ನೀಡಿರುವ ಸಿಎಂ, ಮಾಸ್ಕ್ ಧರಿಸುವಂತೆಯೂ ಹೇಳಿದ್ದಾರೆ. ಇನ್ನು ಮಕ್ಕಳಿಗೆ ಜ್ವರ, ಕೆಮ್ಮು, ಶೀತವಿದ್ರೆ ಶಾಲೆಗೆ ಕಳುಹಿಸದಂತೆ ಆರೋಗ್ಯ ಸಚಿವರು ಕರೆ ನೀಡಿದ್ದಾರೆ. ಒಟ್ನಲ್ಲಿ, ಕೋವಿಡ್ ಮತ್ತೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರೋದು ನಿಜಕ್ಕೂ ಆತಂಕಕಾರಿಯೇ ಸರಿ.


















