ದುಬೈ: ಐಸಿಸಿ ಟೂರ್ನಿಗಳಲ್ಲಿ ಭಾರತಕ್ಕೆ ಹೆಚ್ಚು ತೊಂದರ ಕೊಟ್ಟಿರುವುದು ನ್ಯೂಜಿಲೆಂಡ್ ತಂಡ. ಭಾರತ ತಂಡಕ್ಕೆ ಪಾಕಿಸ್ತಾನ ದೊಡ್ಡ ಲೆಕ್ಕಕ್ಕೆ ಇಲ್ಲ. ಆದರೆ, ಕಿವೀಸ್ ಪಡೆಯೆಂದರೆ ನಡುಕ. ಹೀಗಾಗಿ ಇಂದು ನಡೆಯುವ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಹೆಚ್ಚು ಕೌತುಕದಲ್ಲಿ ನಡೆಯಲಿದೆ.
ಒಂದು ವೇಳೆ ಭಾರತ ತಂಡ ಗೆದ್ದರೆ ಬರೋಬ್ಬರಿ 25 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ (Champions Trophy Final 2025) ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ಶ್ರೇಯಸ್ಸಿಗೆ ಪಾತ್ರವಾಗಲಿದೆ. ಬ್ಲ್ಯಾಕ್ಕ್ಯಾಪ್ಸ್ ಕೂಡ 16 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಕಿರೀಟ ಧರಿಸಿಕೊಳ್ಳಲು ಕಾದಿದೆ ಎಂಬುದು ಕೂಡ ಇಲ್ಲಿ ಗಮನಾರ್ಹ.
2023ರ ಏಕದಿನ ವಿಶ್ವಕಪ್‌ನಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ಭಾರತ ಅಲ್ಲಿ ಆಸೀಸ್ ವಿರುದ್ಧ ಸೋಲು ಕಂಡಿತ್ತು. 2024ರ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಗೆ ಅದೃಷ್ಟ ಕೈ ಹಿಡಿದ ಕಾರಣ ವಿಶ್ವ ಕಪ್ ಗೆಲ್ಲುವುದಕ್ಕೆ ಸಾಧ್ಯವಾಯಿತು. ಅಂದ ಹಾಗೆ ಚಾಂಪಿಯನ್ಸ್ ಟ್ರೋಫಿ ರೋಹಿತ್ಗೆ ಏಕದಿನ ಕ್ರಿಕೆಟ್ನಲ್ಲಿ ಕೊನೇ ನಾಯಕತ್ವದ ಪಂದ್ಯವಾಗಬಹುದು. ಹೀಗಾಗಿ ಅವರಿಗೂ ಪ್ರಮುಖವಾಗಿದೆ. ಜಡೇಜಾ ಹಾಗೂ ಕೊಹ್ಲಿಗೂ ಕೊನೇ ಐಸಿಸಿ ಟೂರ್ನಿ ಎಂದೇ ಹೇಳಲಾಗುತ್ತಿದೆ.
ಭಾರತ ಸಮತೋಲಿತ ತಂಡ
ಫೈನಲ್ ಆಡಲಿರುವ ಭಾರತ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಸಮತೋಲಿತವಾಗಿದೆ. ಕೊಹ್ಲಿ ರನ್ ಬಾರಿಸಲು ಶುರು ಮಾಡಿದ್ದರೆ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆ.ಎಲ್ ರಾಹುಲ್ ಹಾರ್ದಿಕ್ ಪಾಂಡ್ಯ ಪ್ರಚಂಡ ಬ್ಯಾಟಿಂಗ್ ಪಾರ್ಮ್‌ನಲ್ಲಿದ್ದಾರೆ. ರೋಹಿತ್ ಬಾರಿಸುವುದು ಸಣ್ಣ ಮೊತ್ತವಾದರೂ ಅಬ್ಬರದ ಆರಂಭ ನೀಡುತ್ತಿರುವುದು ಸಂತಸದ ವಿಷಯ. ಫೈನಲ್ನಲ್ಲಿ ದೊಡ್ಡ ಮೊತ್ತವೊಂದನ್ನು ಬಾರಿಸಿದರೆ ಭಾರತಕ್ಕೆ ಇನ್ಯಾವ ಚಿಂತೆಯೂ ಇಲ್ಲ.
ಸ್ಪಿನ್ ಅಸ್ತ್ರ
ಭಾರತದ ಬೌಲಿಂಗ್ ಸ್ಪಿನ್ ವಿಭಾಗದಿಂದ ತುಂಬಿಕೊಂಡಿದೆ. ಕುಲದೀಪ್, ಅಕ್ಷರ್, ಜಡೇಜ, ವರುಣ್ ಚಕ್ರವರ್ತಿ ಆಧಾರವಾಗಿದ್ದಾರೆ. ವೇಗ ಬೌಲಿಂಗ್ನಲ್ಲಿ ಮೊಹಮ್ಮದ್ ಶಮಿ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸಾರಥ್ಯವಿದೆ.
ಕಿವೀಸ್ ಕೂಡ ಸಮರ್ಥ ತಂಡ
ನ್ಯೂಜಿಲ್ಯಾಂಡ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ವಿರುದ್ಧ ಸೋತರೂ ನಿರಾಕರಿಸಬಹುದಾದ ತಂಡವಲ್ಲ. ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ ಮತ್ತು ಮಿಚೆಲ್ ಅಪಾಯಕಾರಿ ಬ್ಯಾಟರ್ಗಳು. ಪಂದ್ಯಕ್ಕೂ ಮುನ್ನವೇ ಕಿವೀಸ್‌ನ ಕೋಚ್ ಗ್ಯಾರಿ ಸ್ಟೆಡ್, ‘ಕೆಲವೊಮ್ಮೆ ಪ್ರವಾಹದ ಎದುರು ಈಜುವ ಸಾಹಸ ಮಾಡಬೇಕಾಗುತ್ತದೆ. ಸ್ಪಿನ್ ದಾಳಿಯನ್ನು ಎದುರಿಸಲು ನಾವು ಎಲ್ಲ ರೀತಿಯಿಂದಲೂ ಸಿದ್ಧ’ ಎಂದು ಹೇಳಿದ್ದಾರೆ.
ಪಿಚ್ ಹೇಗಿದೆ?
ಗುಂಪು ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ನಡೆದಿದ್ದ ಪಿಚ್‌ನಲ್ಲಿಯೇ ಫೈನಲ್ ಆಯೋಜನೆಗೊಳ್ಳಲಿದೆ. ಪಂದ್ಯ ಸಾಗಿದಂತೆ ಪಿಚ್ ನಿಧಾನಗೊಳ್ಳಲಿದ್ದು, ಸ್ಪಿನ್ನರ್‌ಗಳು ಹೆಚ್ಚು ಪರಿಣಾಮಕಾರಿಯಾಗಲಿದ್ದಾರೆ
ಪಂದ್ಯದ ವಿವರ
ಏಕದಿನ ಪಂದ್ಯಗಳಲ್ಲಿ ಒಟ್ಟು ಮುಖಾಮುಖಿ: 119
ಭಾರತ ಗೆಲುವು: 50
ನ್ಯೂಜಿಲ್ಯಾಂಡ್ ಗೆಲುವು: 61
7 ಪಂದ್ಯ ಫಲಿತಾಂಶವಿಲ್ಲ. ಒಂದು ಪಂದ್ಯ ಟೈ.
ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ