ದಾವಣಗೆರೆ: ಕೆ.ಎನ್.ರಾಜಣ್ಣ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು.
ಗೌರವಾನ್ವಿತವಾಗಿ ರಾಜೀನಾಮೆ ಕೇಳುವ ಪ್ರಕ್ರಿಯೆ ಮಾಡಬಹುದಿತ್ತು. ವಜಾಗೊಳಿಸಿ ಮುಜುಗುರಕ್ಕೀಡು ಮಾಡಿ ಅವರ ಗೌರವಕ್ಕೆ ಧಕ್ಕೆ ತರುವ ಕೆಲಸವಾಗಿದೆ. ಈ ಬಗ್ಗೆ ಪಕ್ಷಾತೀತವಾಗಿ ಚರ್ಚೆ ಆಗುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ನಿಖಿಲ್, ಪ್ರಜಾಪ್ರಭುತ್ವ ಎನ್ನುವುದು ಕಾಂಗ್ರೆಸ್ ಪಕ್ಷದ ಚೌಕಟ್ಟಿನಲ್ಲಿ ಇದೆಯೇ? ಎಂದು ಕಾಂಗ್ರೆಸ್ ಕೇಂದ್ರದ ನಾಯಕರ ಬಗ್ಗೆ ಜನರು ಚರ್ಚೆ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಆರೋಪಿತ ಮಂತ್ರಿಗಳ ವಜಾಗೊಳಿಸುವ ವಿಚಾರ ಬಂದಿಲ್ಲ. ಆದರೆ ರಾಜಣ್ಣ ಅವರು ವಾಸ್ತವದ ಸ್ಥಿತಿ ಮಾತನಾಡಿದ್ದಾರೆ. ವಾಸ್ತವ ಮಾತಾಡಿದವರನ್ನು ಕಾಂಗ್ರೆಸ್ ಹೈಕಮಾಂಡ್ ಸಂಪುಟದಿಂದ ವಜಾಗೊಳಿಸುವ ಕೆಲಸ ಮಾಡಿದೆ.
224 ಕ್ಷೇತ್ರಗಳಲ್ಲಿ ಬೂತ್ ಲೆವೆಲ್ ಏಜೆಂಟ್ ಗಳು ಇರುತ್ತಾರೆ. ಮತದಾರರ ಪಟ್ಟಿ ಬಗ್ಗೆ ಪ್ರಶ್ನೆ ಮಾಡಲು ಸಭೆ ನಿಗದಿ ಮಾಡಿರುತ್ತಾರೆ. ಈಗ ಕಾಲ ಮಿಂಚಿ ಹೋದ ಮೇಲೆ ಪ್ರಶ್ನೆ ಮಾಡುವುದು ಯಾಕೆ ? ಎಂದು ರಾಜಣ್ಣ ಕೇಳಿದ್ದಕ್ಕೆ ಹೈಕಮಾಂಡ್ ಅವರಿಗೆ ವಜಾ ಕೊಡುಗೆ ನೀಡಿದೆ ಎಂದು ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆ ವೇಳೆ 136 ಕ್ಷೇತ್ರ ಗೆದ್ದಿದ್ದರು. ಆಗ ಈ ಬಗ್ಗೆ ಕೇಳಿಲ್ಲ. ಈಗ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಸೀಟ್ ಬಂದಾಗ ಪ್ರಶ್ನೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರಿಗೆ ಸ್ಪಷ್ಟತೆ ಇಲ್ಲ. ರಾಜಣ್ಣರನ್ನು ವಜಾ ಮಾಡಿದರೆ ಏನಾಗುತ್ತದೆ ? ಪರಿಶಿಷ್ಟ ಸಮುದಾಯದ ರಾಜಣ್ಣಗೆ ಆಗಿರುವ ಮುಜುಗರ, ಅಗೌರವವಿದು. ಇದನ್ನು ಕಾಂಗ್ರೆಸ್ ನ ರಾಜ್ಯ ನಾಯಕರು ಕೇಂದ್ರ ನಾಯಕರನ್ನು ಪ್ರಶ್ನೆ ಮಾಡಬೇಕು ಎಂದು ಹೇಳಿದ್ದಾರೆ.



















