ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಅವರ ಗ್ಯಾಂಗ್ ಜೈಲು ಪಾಲಾಗಿ ಎರಡು ತಿಂಗಳಾಗಿವೆ. ಪೊಲೀಸರು ಪ್ರಕರಣದ ತನಿಖೆಯನ್ನು ಎಳೆ ಎಳೆಯಾಗಿ ನಡೆಸುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ದರ್ಶನ್ ಆಂಡ್ ಗ್ಯಾಂಗ್ ಗೆ ಜಾಮೀನು ಸಿಗುವುದು ಅನುಮಾನ ಎನ್ನಲಾಗುತ್ತಿದೆ.
ಸಾಕ್ಷ್ಯಗಳ ಸಂಗ್ರಹ, ಪರಸ್ಪರ ಲಿಂಕ್ ಜೋಡಿಸುವ ಕಾರ್ಯಕ್ಕೆ ಸದ್ಯ ಪೊಲೀಸರು ಮುಂದಾಗಿದ್ದಾರೆ. ಪ್ರಕರಣದಲ್ಲಿ ಎಲ್ಲ ಆರೋಪಿಗಳ ಪಾತ್ರದ ಕುರಿತು, ಪ್ರತಿಯೊಬ್ಬ ಆರೋಪಿಯ ವಿರುದ್ಧ ಇರುವ ಸಾಕ್ಷ್ಯಗಳ ಲಭ್ಯತೆಗಳನ್ನು ಸವಿಸ್ತಾರವಾಗಿ ಚಾರ್ಜ್ ಶೀಟ್ ನಲ್ಲಿ ಪೊಲೀಸರು ಉಲ್ಲೇಖಿಸುತ್ತಿದ್ದಾರೆ.
ಆದರೆ, ದರ್ಶನ್ ಮತ್ತು ಗ್ಯಾಂಗ್ ಗೆ ಬೇಗನೆ ಜಾಮೀನು ದೊರೆಯಬಾರದೆಂಬ ಕಾರಣಕ್ಕೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುವುದನ್ನು ತಡ ಮಾಡುತ್ತಿದ್ದಾರೆಂದು ಹಲವರು ಆರೋಪಿಸುತ್ತಿದ್ದಾರೆ. ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ ಹೆಚ್ಚಾಗಿರುವುದರಿಂದಾಗಿ ಪೊಲೀಸರಿಗೆ ಸಮಯ ಹಿಡಿಯುತ್ತಿದೆ. ಈ ಪ್ರಕರಣದಲ್ಲಿ 17 ಆರೋಪಿಗಳಿದ್ದಾರೆ. ಕೊಲೆಯಾಗುವುದುಕ್ಕೂ ಮುನ್ನ ಯೋಜನೆ ರೂಪಿಸಿದ್ದಾರೆ. ಕೊಲೆಯಾದ ನಂತರ ಎರಡು ದಿನ ಹಲವಾರು ಘಟನೆಗಳು ನಡೆದಿವೆ. ಹೀಗಾಗಿ ಸಾಕ್ಷ್ಯ, ಮಹಜರು ಮಾಡಿರುವ ಸ್ಥಳಗಳ ಸಂಖ್ಯೆ ಎಲ್ಲ ಹೆಚ್ಚಾಗಿವೆ. ಈ ನಿಟ್ಟಿನಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ತಡವಾಗುತ್ತಿದೆ.
‘ಚಿತ್ರದುರ್ಗ, ಬೆಂಗಳೂರು, ಮೈಸೂರಿನಲ್ಲಿ ಸ್ಥಳ ಮಹಜರು ನಡೆಸಲಾಗಿದೆ. ಸಾಕ್ಷಿ ಸಂಗ್ರಹಣೆ, ಸಾಕ್ಷಿಗಳ ವಿಚಾರಣೆ, ಎಫ್ಎಸ್ಎಲ್, ಫಿಂಗರ್ ಪ್ರಿಂಟ್ ವರದಿ ಪಡೆದುಕೊಳ್ಳಬೇಕು, ಎಫ್ ಎಸ್ ಎಲ್ ವರದಿಗಳು ಬೇಗ ಪೊಲೀಸರ ಕೈಸೇರುವುದಿಲ್ಲ. ಸಾಕ್ಷಿಗಳು ತಾಳೆ ಆಗಬೇಕು, ಒಂದಕ್ಕೊಂದು ಪೂರಕ ಸಾಕ್ಷಿಗಳು ಇರಬೇಕು. ಸಂಶಯ ಮೂಡುವಂತಹ ಸಾಕ್ಷಿಗಳು ಕೂಡ ಇರಬಾರದು. ಕಾನೂನು ಅಡಿಯಲ್ಲಿ ಒಪ್ಪುವಂತಹ ಸಾಕ್ಷಿ ಇರಬೇಕು. ಇವುಗಳನ್ನೆಲ್ಲ ಸಂಗ್ರಹಿಸಿ, ಸರಿಯಾಗಿ ನೀಡಬೇಕಾದರೆ, ಹೆಚ್ಚು ದಿನ ಬೇಕಾಗುತ್ತದೆ. ಹೀಗಾಗಿಯೇ ಚಾರ್ಜ್ ಶೀಟ್ ಸಲ್ಲಿಕೆಗೆ ತಡವಾಗುತ್ತಿದೆ.
ಆದರೂ 90 ದಿನಗಳ ಒಳಗಾಗಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ವಿವರವಾದ ಚಾರ್ಜ್ ಶೀಟ್ ಸಲ್ಲಿಸಲು ಆಗದಿದ್ದರೂ ಪ್ರಾಥಮಿಕ ಚಾರ್ಜ್ ಶೀಟ್ ನ್ನಾದರೂ 90 ದಿನಗಳ ಒಳಗೆ ಸಲ್ಲಿಸಿ ಟ್ರಯಲ್ ಆರಂಭಿಸುವ ಯೋಜನೆಯಲ್ಲಿ ಪೊಲೀಸರಿದ್ದಾರೆ. ಹೀಗಾಗಿ ದರ್ಶನ್ ಆಂಡ್ ಗ್ಯಾಂಗ್ ಗೆ ಜಾಮೀನು ಪಡೆಯುವುದು ಕಷ್ಟವಾಗುತ್ತಿದೆ.