ವಾಷಿಂಗ್ಟನ್ : ವಿಶ್ವದ ಅತಿ ಪ್ರಮುಖ ತೈಲ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯ ಮೇಲೆ ಹಿಡಿತ ಸಾಧಿಸುವ ಚೀನಾದ ಮಹತ್ವಾಕಾಂಕ್ಷೆ ಇದೀಗ ಚಿಗುರೊಡೆಯುತ್ತಿದೆಲ್ಲ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮಿತಿಮೀರುತ್ತಿರುವಂತೆಯೇ, ಚೀನಾ ಈ ಬಿಕ್ಕಟ್ಟನ್ನು ತನ್ನ ಭೌಗೋಳಿಕ-ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ನೀಡಿದ ಕಠಿಣ ಎಚ್ಚರಿಕೆ ಹಾಗೂ ಅದಕ್ಕೆ ಪ್ರತಿಯಾಗಿ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘೇರ್ ಘಲಿಬಾಫ್ ನೀಡಿದ ತೀಕ್ಷ್ಣ ಪ್ರತಿಕ್ರಿಯೆಯು, ಜಾಗತಿಕ ಹೂಡಿಕೆದಾರರ ಗಮನವನ್ನು ಈ ಮಹತ್ವದ ಪಲ್ಲಟದತ್ತ ಸೆಳೆದಿದೆ.
ಚೀನಾದ ರಣತಂತ್ರವೇನು?
ಇರಾನ್ ಮತ್ತು ಅಮೆರಿಕದ ನಡುವಿನ ಈ ಸಂಘರ್ಷವು ಕೇವಲ ಅಲ್ಪಾವಧಿಯದ್ದಲ್ಲ, ಬದಲಿಗೆ ಇದು ಜಾಗತಿಕ ತೈಲ ಮತ್ತು ಹೊರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಬೃಹತ್ ಕದನವಾಗಿದೆ ಎಂದು ಮರ್ಸೆಲ್ಲಸ್ ಇನ್ವೆಸ್ಟ್‌ಮೆಂಟ್ಸ್‌ನ ಹಿರಿಯ ಅಧಿಕಾರಿ ಸೌರಭ್ ಮುಖರ್ಜಿಯಾ ವಿಶ್ಲೇಷಿಸಿದ್ದಾರೆ. ಅವರ ಪ್ರಕಾರ, ಚೀನಾ ಶೀಘ್ರದಲ್ಲೇ ಇರಾನ್ ಜೊತೆ ಮತ್ತಷ್ಟು ನಿಕಟವಾಗಿ ಮೈತ್ರಿ ಮಾಡಿಕೊಂಡು, ಹೊರ್ಮುಜ್ ಜಲಸಂಧಿಯ ಮೂಲಕ ಸಾಗುವ ಜಾಗತಿಕ ತೈಲ ಪೂರೈಕೆಯ ಮೇಲೆ ನಿಯಂತ್ರಣ ಸಾಧಿಸುವ ಸಾಧ್ಯತೆಯಿದೆ.
ಕಾರ್ನೆಗೀ ಸಂಸ್ಥೆಯ ಅಬ್ದುಲ್ಲಾ ಬಾಬೂದ್ ಅವರ ವಾದವೂ ಇದನ್ನೇ ಪುಷ್ಟೀಕರಿಸುತ್ತದೆ. ಗಲ್ಫ್ ರಾಷ್ಟ್ರಗಳ ತೈಲದ ಮೇಲಿನ ಚೀನಾದ ಅವಲಂಬನೆಯು ಇದೀಗ ದೊಡ್ಡಮಟ್ಟದ ಕಾರ್ಯತಂತ್ರವಾಗಿ ಮಾರ್ಪಟ್ಟಿದೆ. ಚೀನಾ ಈಗಾಗಲೇ ಅಮೆರಿಕದ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಲೆಕ್ಕಿಸದೆ ಇರಾನ್‌ನಿಂದ ರಿಯಾಯಿತಿ ದರದಲ್ಲಿ ಅಪಾರ ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. 2021ರಲ್ಲಿ ಉಭಯ ದೇಶಗಳ ನಡುವೆ ಏರ್ಪಟ್ಟ 25 ವರ್ಷಗಳ ಸುದೀರ್ಘಾವಧಿಯ ಪಾಲುದಾರಿಕೆಯು ಈ ಸಂಬಂಧವನ್ನು ಇನ್ನಷ್ಟು ಬಲಪಡಿಸಿದ್ದು, ಭವಿಷ್ಯದ ಸೇನಾ ಸಹಕಾರಕ್ಕೂ ಮುನ್ನುಡಿ ಬರೆದಿದೆ. ಇದಲ್ಲದೆ, ಯುಎಇ, ಒಮಾನ್, ಇರಾನ್ ಮತ್ತು ಪಾಕಿಸ್ತಾನದ ಬಂದರುಗಳು ಹಾಗೂ ಮೂಲಸೌಕರ್ಯಗಳಲ್ಲಿ ಶತಕೋಟಿ ಡಾಲರ್ ಹೂಡಿಕೆ ಮಾಡುವ ಮೂಲಕ ಚೀನಾ, ಗಲ್ಫ್ ವಲಯದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದೆ.
ಭಾರತಕ್ಕೆ ಆತಂಕದ ಕಾರ್ಮೋಡ
ಈ ಜಾಗತಿಕ ಭೌಗೋಳಿಕ ರಾಜಕೀಯ ಬೆಳವಣಿಗೆಗಳ ಪರಿಣಾಮ ಭಾರತದ ಮೇಲೆ ತಕ್ಷಣವೇ ಮತ್ತು ತೀವ್ರವಾಗಿ ಉಂಟಾಗಲಿದೆ. ಈ ಬಿಕ್ಕಟ್ಟಿಗೂ ಮುನ್ನವೇ ಭಾರತದ ಆರ್ಥಿಕತೆಯು ಮಂದಗತಿಯ ಬೆಳವಣಿಗೆಯಿಂದಾಗಿ ಕೊಂಚ ಸಂಕಷ್ಟದಲ್ಲಿತ್ತು. ಇದೀಗ ದುಬಾರಿ ತೈಲ, ದುರ್ಬಲ ರೂಪಾಯಿ ಹಾಗೂ ಏರುತ್ತಿರುವ ಬಡ್ಡಿ ದರಗಳಂತಹ ಕಠಿಣ ಸವಾಲುಗಳನ್ನು ಭಾರತ ಒಟ್ಟೊಟ್ಟಿಗೆ ಎದುರಿಸಬೇಕಾಗಿದೆ ಎಂದು ಮುಖರ್ಜಿಯಾ ಎಚ್ಚರಿಸಿದ್ದಾರೆ.
ಈ ದಿಢೀರ್ ಆರ್ಥಿಕ ಹೊರೆಯು ಸಾಮಾನ್ಯ ಕುಟುಂಬಗಳು ಮತ್ತು ಮಾರುಕಟ್ಟೆಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಉದ್ಯೋಗ ಸೃಷ್ಟಿಯಲ್ಲಿನ ಕುಸಿತ ಮತ್ತು ಹೆಚ್ಚುತ್ತಿರುವ ಸಾಲದ ಹೊರೆಯಿಂದಾಗಿ ದೇಶದಲ್ಲಿನ ಗ್ರಾಹಕರ ಖರೀದಿ ಸಾಮರ್ಥ್ಯವು ತೀವ್ರ ಸವಾಲನ್ನು ಎದುರಿಸುತ್ತಿದೆ. ಮುಂಬರುವ ದಿನಗಳಲ್ಲಿ ಕಂಪನಿಗಳ ಪ್ರತಿ ಷೇರಿನ ಗಳಿಕೆಯಲ್ಲಿ (EPS) ಕಡಿತವಾಗುವುದು ಅನಿವಾರ್ಯವಾಗಲಿದ್ದು, ಹೂಡಿಕೆದಾರರು ಮಾರುಕಟ್ಟೆಯ ಮೌಲ್ಯಮಾಪನಗಳನ್ನು ಪ್ರಶ್ನಿಸುವ ಕಾಲ ಸನ್ನಿಹಿತವಾಗಿದೆ ಎಂದು ಆರ್ಥಿಕ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಹೊರ್ಮುಜ್ ಜಲಸಂಧಿಯ ಮೇಲಿನ ಈ ಹಗ್ಗಜಗ್ಗಾಟ ಮುಂದಿನ ಹಲವು ತಿಂಗಳುಗಳ ಕಾಲ ಮುಂದುವರಿಯಲಿದ್ದು, ಜಾಗತಿಕ ಆರ್ಥಿಕತೆಯ ಮೇಲೆ ಗಾಢವಾದ ಪರಿಣಾಮ ಬೀರಲಿದೆ.
ಇದನ್ನೂ ಓದಿ : ಭದ್ರಾ ನದಿಯಲ್ಲಿ ಈಜಲು ಹೋದ IT ಕಂಪನಿ ಉದ್ಯೋಗಿ ಶವವಾಗಿ ಪತ್ತೆ



















