ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಅಸ್ಥಿರಗೊಳಿಸಲು ಅಮೆರಿಕ ಸಂಚು ರೂಪಿಸಿದೆ ಎಂದು ರಷ್ಯಾ ವರದಿ ಮಾಡಿದೆ.
ರಷ್ಯಾದ ಸರ್ಕಾರಿ ಮಾಧ್ಯಮ ಸ್ಪುಟ್ನಿಕ್, ಅಮೆರಿಕವು ಭಾರತದ ಸರ್ಕಾರ ಬೀಳಿಸಲು ಯತ್ನಿಸುತ್ತಿದೆ ಎಂದು ಆಪಾದಿಸಿದೆ. ಅಮೆರಿಕದ ಗೂಢಚರ ಸಂಸ್ಥೆ ಸಿಐಎ ಆಂಧ್ರ ಪ್ರದೇಶದ ಬ್ಯಾಪ್ಟಿಸ್ಟ್ ಚರ್ಚ್ ನೆರವಿನಿಂದ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸಲು ಯತ್ನಿಸುತ್ತಿದೆ. ಮೋದಿ ಸರ್ಕಾರಕ್ಕೆ ಟಿಡಿಪಿ ಬೆಂಬಲ ಹಿಂತೆಗೆದುಕೊಳ್ಳುವಂತೆ ನಾಯ್ಡು ಅವರಿಗೆ ಒತ್ತಡ ಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಅಲ್ಲದೇ, ಭಾರತದ ವಿರೋಧ ಪಕ್ಷದ ನಾಯಕರನ್ನೂ ಅಮೆರಿಕ ಸಂಪರ್ಕ ಮಾಡುತ್ತಿದ್ದು, ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಂತೆ ಪ್ರಚೋದಿಸುತ್ತಿದೆ. ಈ ಮೂಲಕ ಅಲ್ಲಿನ ಮೋದಿ ನೇತೃತ್ವದ ಸರ್ಕಾರ ಉರುಳಿಸಿ ಅಸ್ಥಿರತೆಯ ವಾತಾವರಣ ಸೃಷ್ಟಿಸಲು ಅಮೆರಿಕ ಸಂಚು ರೂಪಿಸುತ್ತಿದೆ ಎಂದು ವರದಿ ಹೇಳಿದೆ.
ಭಾರತದ ಆಂತರಿಕ ಸ್ಥಿರತೆ ಹಾಗೂ ರಾಜಕೀಯ ಸ್ಥಿರತೆಗೆ ಧಕ್ಕೆ ತರಲು ಅಮೆರಿಕ ಯತ್ನಿಸುತ್ತಿದೆ. ಮೋದಿ ಸರಕಾರ ಮೂರನೇ ಅವಧಿಗೆ ಅಧಿಕಾರ ಹಿಡಿದಿದೆ. ಪ್ರಧಾನಿ ಮೋದಿ ಅವರು ತಮ್ಮ ‘ಸಾಫ್ಟ್ ಪವರ್’ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಆದರೆ, ಈ ಸನ್ನಿವೇಶ ಬದಲಾಯಿಸಲು ಅಮೆರಿಕ ತಂತ್ರ ಹೂಡುತ್ತಿದೆ ಎಂದು ವರದಿ ಮಾಡಿದೆ.