ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಅಮೆರಿಕದ ಯುದ್ಧನೌಕೆಗಳು ಇರಾನ್ ಕಡೆಗೆ ತೆರಳುತ್ತಿರುವ ಬೆನ್ನಲ್ಲೇ, ಇರಾನ್ ಸರ್ಕಾರ ಅಮೆರಿಕಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ಟೆಹ್ರಾನ್ ಮೇಲೆ ಯಾವುದೇ ರೀತಿಯ ದಾಳಿ ನಡೆದರೂ ಅದನ್ನು “ನಮ್ಮ ಮೇಲಿನ ಪೂರ್ಣ ಪ್ರಮಾಣದ ಯುದ್ಧ” (All-out war) ಎಂದೇ ಪರಿಗಣಿಸಿ, ಅತ್ಯಂತ ಕಠಿಣ ರೀತಿಯಲ್ಲಿ ಪ್ರತಿಕ್ರಿಯಿಸುವುದಾಗಿ ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.
ಅಮೆರಿಕದ ಬೃಹತ್ ನೌಕಾಪಡೆ (Armada) ಮಧ್ಯಪ್ರಾಚ್ಯದತ್ತ ಧಾವಿಸುತ್ತಿದೆ ಎಂದು ಟ್ರಂಪ್ ಹೇಳಿಕೆ ನೀಡಿದ ಮರುದಿನವೇ ಇರಾನ್ ಈ ಎಚ್ಚರಿಕೆ ರವಾನಿಸಿದೆ.
ಇರಾನ್ ಎಚ್ಚರಿಕೆಯಲ್ಲೇನಿದೆ?
ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು, ಅಯತೊಲ್ಲಾ ಖಮೇನಿ ನೇತೃತ್ವದ ಆಡಳಿತವು ಅಮೆರಿಕದ ಬೆದರಿಕೆಯನ್ನು ಎದುರಿಸಲು ತನ್ನ ಬಳಿ ಇರುವ ಎಲ್ಲಾ ಅಸ್ತ್ರಗಳನ್ನು ಬಳಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
“ಈ ಬಾರಿ ನಮ್ಮ ಮೇಲೆ ಸೀಮಿತ ದಾಳಿ, ಸರ್ಜಿಕಲ್ ಸ್ಟ್ರೈಕ್ ಅಥವಾ ಮತ್ಯಾವುದೇ ಹೆಸರಿನಲ್ಲಿ ದಾಳಿ ನಡೆದರೂ, ನಾವು ಅದನ್ನು ನಮ್ಮ ಮೇಲಿನ ಪೂರ್ಣ ಪ್ರಮಾಣದ ಯುದ್ಧ ಎಂದೇ ಭಾವಿಸುತ್ತೇವೆ. ಈ ವಿಷಯವನ್ನು ಇತ್ಯರ್ಥಪಡಿಸಲು ಅತ್ಯಂತ ಕಠಿಣ ರೀತಿಯಲ್ಲಿಯೇ ಪ್ರತಿಕ್ರಿಯಿಸುತ್ತೇವೆ,” ಎಂದು ಅಧಿಕಾರಿ ತಿಳಿಸಿದ್ದಾರೆ.
ಹೆಚ್ಚಿದ ಸೇನಾ ಜಮಾವಣೆ:
ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಟೊಮಾಹಾಕ್ ಕ್ಷಿಪಣಿಗಳನ್ನು ಹೊಂದಿರುವ ಅಮೆರಿಕದ ವಿಮಾನವಾಹಕ ನೌಕೆ ‘ಯುಎಸ್ಎಸ್ ಅಬ್ರಹಾಂ ಲಿಂಕನ್’ (USS Abraham Lincoln) ಮತ್ತು ಮೂರು ಡಿಸ್ಟ್ರಾಯರ್ ಯುದ್ಧನೌಕೆಗಳು ಮಧ್ಯಪ್ರಾಚ್ಯದತ್ತ ಸಾಗುತ್ತಿವೆ. ಅಲ್ಲದೆ, ಅಮೆರಿಕದ ವಾಯುಪಡೆಗೆ ಸೇರಿದ ಹನ್ನೆರಡು ಎಫ್-15ಇ (F-15E) ಫೈಟರ್ ಜೆಟ್‌ಗಳನ್ನು ಸಹ ಈ ಪ್ರಾಂತ್ಯಕ್ಕೆ ಕಳುಹಿಸಲಾಗಿದೆ.
ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಕಟ್ಟೆಚ್ಚರ ವಹಿಸಿದೆ. “ಅಮೆರಿಕದ ಈ ಸೇನಾ ಜಮಾವಣೆ ನಿಜವಾದ ಸಂಘರ್ಷಕ್ಕೆ ನಾಂದಿಯಾಗದಿರಲಿ ಎಂದು ಆಶಿಸುತ್ತೇವೆ. ಆದರೆ ನಮ್ಮ ಸೇನೆ ಎಂಥದ್ದೇ ಕೆಟ್ಟ ಪರಿಸ್ಥಿತಿಯನ್ನೂ ಎದುರಿಸಲು ಸನ್ನದ್ಧವಾಗಿದೆ. ಇರಾನ್ ಮೇಲೆ ದಾಳಿ ಮಾಡಲು ಯತ್ನಿಸುವವರ ವಿರುದ್ಧ ಸಮತೋಲನ ಕಾಯ್ದುಕೊಳ್ಳಲು ಲಭ್ಯವಿರುವ ಎಲ್ಲವನ್ನೂ ಬಳಸಲಾಗುವುದು,” ಎಂದು ಇರಾನ್ ಅಧಿಕಾರಿ ಹೇಳಿದ್ದಾರೆ.
ಪ್ರತಿಭಟನೆ ಮತ್ತು ಉದ್ವಿಗ್ನತೆ:
ಹೊಸ ವರ್ಷದ ಆರಂಭದಿಂದಲೂ ಇರಾನ್‌ನಲ್ಲಿ ಆಡಳಿತದ ವಿರುದ್ಧ ಭಾರಿ ಪ್ರತಿಭಟನೆಗಳು ನಡೆಯುತ್ತಿದ್ದು, ಆಕ್ಟಿವಿಸ್ಟ್‌ಗಳ ಪ್ರಕಾರ 5,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಪ್ರತಿಭಟನಾಕಾರರ ಮೇಲಿನ ದಬ್ಬಾಳಿಕೆಯನ್ನು ಖಂಡಿಸಿ ಟ್ರಂಪ್ ಸೇನಾ ಕಾರ್ಯಾಚರಣೆಯ ಎಚ್ಚರಿಕೆ ನೀಡಿದ್ದರು.
ಕಳೆದ ವಾರವಷ್ಟೇ ಬಂಧಿತ ಪ್ರತಿಭಟನಾಕಾರರನ್ನು ಗಲ್ಲಿಗೇರಿಸುವುದಿಲ್ಲ ಎಂದು ಇರಾನ್ ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಯಾದಂತೆ ಕಂಡಿತ್ತು. ತಮ್ಮ ಬೆದರಿಕೆಯಿಂದಾಗಿ 800ಕ್ಕೂ ಹೆಚ್ಚು ಪ್ರತಿಭಟನಾಕಾರರ ಪ್ರಾಣ ಉಳಿದಿದೆ ಎಂದು ಟ್ರಂಪ್ ಹೇಳಿಕೊಂಡಿದ್ದರು. ಆದರೆ ಇದೀಗ ಟ್ರಂಪ್ ದಾವೋಸ್ ಪ್ರವಾಸದಿಂದ ಮರಳಿದ ನಂತರ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ.
ಐಆರ್‌ಜಿಸಿ ಬೆದರಿಕೆ:
ಇನ್ನೊಂದೆಡೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್ ಕೂಡ ಎಚ್ಚರಿಕೆ ನೀಡಿದ್ದು, “ನಮ್ಮ ಬೆರಳು ಟ್ರಿಗರ್ ಮೇಲೆಯೇ ಇದೆ” ಎಂದು ಅಮೆರಿಕ ಮತ್ತು ಇಸ್ರೇಲ್‌ಗೆ ಎಚ್ಚರಿಸಿದ್ದಾರೆ. ಇರಾನ್ ಸೇನೆಯ ವಕ್ತಾರರು ಕೂಡ ಪ್ರತಿಕ್ರಿಯಿಸಿ, ಸುಪ್ರೀಂ ಲೀಡರ್ ವಿರುದ್ಧ ಯಾವುದೇ ಕ್ರಮ ಕೈಗೊಂಡರೆ “ಜಗತ್ತಿಗೆ ಬೆಂಕಿ ಹಚ್ಚುವುದಾಗಿ” ಗುಡುಗಿದ್ದಾರೆ.
ಇದನ್ನೂ ಓದಿ: ಮಸಾಜ್ ಬುಕ್ಕಿಂಗ್ ರದ್ದು ಮಾಡಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ | ಮುಂಬೈನಲ್ಲಿ ಥೆರಪಿಸ್ಟ್ ದರ್ಪ, ವಿಡಿಯೋ ವೈರಲ್



















