ಜೆರುಸಲೇಂ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಿಚ್ಚು ತೀವ್ರಗೊಳ್ಳುತ್ತಿದ್ದು, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಸ್ರೇಲ್‌ನ ಅತಿದೊಡ್ಡ ತೈಲ ಸಂಸ್ಕರಣಾಗಾರವಾದ ಹೈಫಾ ಮೇಲಿನ ಹೈಫಾ ಬೇ ಮೇಲೆ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ಭಾರತದೊಂದಿಗೆ ಆರ್ಥಿಕ ನಂಟು ಹೊಂದಿರುವ ಈ ತೈಲ ಸಂಸ್ಕರಣಾಗಾರದ ಮೇಲೆ ನಡೆದಿರುವ ದಾಳಿಯು ಇಸ್ರೇಲ್‌ಗೆ ರಕ್ಷಣೆ ಮತ್ತು ಆರ್ಥಿಕ ರಂಗದಲ್ಲಿ ಭಾರಿ ಹೊಡೆತ ನೀಡುವ ಸಾಧ್ಯತೆಯಿದೆ.
ಇರಾನ್‌ನ ರಾಜಧಾನಿ ಟೆಹ್ರಾನ್ ಸುತ್ತಮುತ್ತಲಿರುವ ತೈಲ ಸಂಗ್ರಹಾಗಾರಗಳ ಮೇಲೆ ಇಸ್ರೇಲ್ ಮತ್ತು ಅಮೆರಿಕ ಇತ್ತೀಚೆಗೆ ನಡೆಸಿದ್ದ ದಾಳಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇರಾನ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ದಾಳಿಗಾಗಿ ಇರಾನ್ ‘ಖೈಬರ್ ಶೆಕಾನ್’ ಎಂಬ ಅತ್ಯಾಧುನಿಕ ಘನ-ಇಂಧನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿದೆ. ಇಸ್ರೇಲ್‌ನ ಒಟ್ಟು ಇಂಧನ ಅಗತ್ಯದ ಶೇಕಡಾ 50ರಿಂದ 60 ರಷ್ಟು ಪೂರೈಸುವ ಈ ಬಜಾನ್ ಗ್ರೂಪ್ (Bazan Group) ಸಂಸ್ಕರಣಾಗಾರವನ್ನು ಗುರಿಯಾಗಿಸುವ ಮೂಲಕ ಇಸ್ರೇಲ್‌ನ ಇಂಧನ ಭದ್ರತೆಗೆ ಇರಾನ್ ಸವಾಲು ಹಾಕಿದೆ.
ಭಾರತಕ್ಕೂ ತಟ್ಟಲಿದೆಯೇ ಆರ್ಥಿಕ ಬಿಸಿ?
ವಿಶೇಷವೆಂದರೆ, ಹೈಫಾ ಸಂಸ್ಕರಣಾಗಾರವು ಭಾರತ ಮತ್ತು ಇಸ್ರೇಲ್ ನಡುವಿನ ಆರ್ಥಿಕ ಸಹಭಾಗಿತ್ವದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಈ ಹಿಂದೆ ಜೂನ್ 2025ರಲ್ಲಿ ನಡೆದ ದಾಳಿಯ ಸಂದರ್ಭದಲ್ಲೂ ಈ ಘಟಕವು ಸ್ಥಗಿತಗೊಂಡು ಭಾರಿ ನಷ್ಟ ಉಂಟಾಗಿತ್ತು. ಈಗ ಮತ್ತೊಮ್ಮೆ ಅದೇ ಸ್ಥಳದ ಮೇಲೆ ದಾಳಿ ನಡೆದಿರುವುದು ಜಾಗತಿಕ ಇಂಧನ ಮಾರುಕಟ್ಟೆ ಹಾಗೂ ಈ ಯೋಜನೆಯಲ್ಲಿ ಹೂಡಿಕೆ ಮಾಡಿರುವ ಅಂತರಾಷ್ಟ್ರೀಯ ಕಂಪನಿಗಳಲ್ಲಿ ಆತಂಕ ಮೂಡಿಸಿದೆ.
ಶರಣಾಗತಿಯ ಪ್ರಶ್ನೆಯೇ ಇಲ್ಲ ಎಂದ ಇರಾನ್ ಅಧ್ಯಕ್ಷ
ದಾಳಿಯ ಬೆನ್ನಲ್ಲೇ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಇರಾನ್ ಅಧ್ಯಕ್ಷರು, “ಅಮೆರಿಕ ಮತ್ತು ಇಸ್ರೇಲ್‌ನ ಯಾವುದೇ ಆಕ್ರಮಣಕಾರಿ ದಾಳಿಗಳಿಗೆ ನಾವು ಬಲವಾದ ಪ್ರತ್ಯುತ್ತರ ನೀಡುತ್ತೇವೆ. ನಾವು ಯಾವುದೇ ಕಾರಣಕ್ಕೂ ಶರಣಾಗುವುದಿಲ್ಲ,” ಎಂದು ಘೋಷಿಸಿದ್ದಾರೆ. ಇಸ್ರೇಲ್‌ನ ಆರ್ಥಿಕ ಬೆನ್ನೆಲುಬನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸುತ್ತಿರುವ ಈ ಸರಣಿ ದಾಳಿಗಳು ಸಮರವನ್ನು ಇನ್ನಷ್ಟು ವಿಕೋಪಕ್ಕೆ ಒಯ್ಯುವ ಸಾಧ್ಯತೆಯಿದೆ.
ಇದನ್ನೂ ಓದಿ : ಟೆಹ್ರಾನ್ ಮೇಲೆ ಇಸ್ರೇಲ್ ಭೀಕರ ದಾಳಿ : ತೈಲ ಸಂಗ್ರಹಾಗಾರಗಳು ಭಸ್ಮ



















