ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೇವಲ ಕ್ರಿಕೆಟ್ ಪಂದ್ಯಾವಳಿಯಾಗಿ ಉಳಿದಿಲ್ಲ; ಅದೀಗ ಜಾಗತಿಕ ಕ್ರೀಡಾ ಮಾರುಕಟ್ಟೆಯ ದೈತ್ಯ ಶಕ್ತಿಯಾಗಿ ಬೆಳೆದು ನಿಂತಿದೆ. ಇತ್ತೀಚೆಗೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವ ಬದಲಾವಣೆ ಹಾಗೂ ಭಾರಿ ಮೊತ್ತದ ಡೀಲ್ ಕುರಿತ ವರದಿಗಳ ಬೆನ್ನಲ್ಲೇ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಐಪಿಎಲ್‌ನ ಆರ್ಥಿಕ ಮೌಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂಗ್ಲಿಷ್ ಪ್ರೀಮಿಯರ್ ಲೀಗ್ (ಇಪಿಎಲ್) ಮತ್ತು ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ (ಎನ್‌ಬಿಎ) ನಂತಹ ಜಾಗತಿಕ ಕ್ರೀಡಾ ಲೀಗ್‌ಗಳಿಗೆ ಸರಿಸಮಾನವಾಗಿ ಐಪಿಎಲ್ ಬೆಳೆದಿದೆ ಎಂದು ಅವರು ಬಣ್ಣಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ಬಹುಪಾಲು ಶೇರುಗಳನ್ನು ಅಮೆರಿಕ ಮೂಲದ ಉದ್ಯಮಿ ಕಾಲ್ ಸೋಮಾನಿ ನೇತೃತ್ವದ ಒಕ್ಕೂಟವೊಂದು ಭಾರಿ ಮೊತ್ತಕ್ಕೆ ಖರೀದಿಸಿದೆ ಎಂಬ ಸುದ್ದಿಯಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಈ ಒಪ್ಪಂದದ ಮೊತ್ತ ಬರೋಬ್ಬರಿ 1.63 ಬಿಲಿಯನ್ ಡಾಲರ್ (ಅಂದಾಜು 15,000 ಕೋಟಿ ರೂಪಾಯಿಗಳು). ಈ ದೈತ್ಯ ಒಪ್ಪಂದದ ಅಂಕಿ-ಅಂಶಗಳು ಖುದ್ದು ಸೌರವ್ ಗಂಗೂಲಿ ಅವರನ್ನು ಬೆರಗುಗೊಳಿಸಿವೆ. ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿದ ಅವರು, ಐಪಿಎಲ್‌ಗೆ ಇದೊಂದು ಅದ್ಭುತ ಬೆಳವಣಿಗೆ. ಕೇವಲ ಎರಡು-ಮೂರು ತಿಂಗಳು ನಡೆಯುವ ಕ್ರೀಡಾ ಲೀಗ್‌ವೊಂದರ ಫ್ರಾಂಚೈಸಿಗೆ ಈ ಪರಿಯ ಮೌಲ್ಯ ಸಿಗುತ್ತಿರುವುದು ನಿಜಕ್ಕೂ ನಂಬಲಾಗದ ಸಂಗತಿ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಐಪಿಎಲ್‌ನ ಸ್ಮರಣೀಯ ಆರಂಭ ಮತ್ತು ಜಾಗತಿಕ ವಿಸ್ತರಣೆ
ಐಪಿಎಲ್‌ನ ಇಂದಿನ ಯಶಸ್ಸನ್ನು ನೋಡುತ್ತಿರುವಾಗ, ಅದರ ಆರಂಭಿಕ ದಿನಗಳು ನೆನಪಾಗುತ್ತವೆ ಎಂದು ಗಂಗೂಲಿ ಮೆಲುಕು ಹಾಕಿದರು. 2008ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವಿನ ಮೊದಲ ಪಂದ್ಯದಲ್ಲಿ ಲೀಗ್‌ನ ಮೊಟ್ಟಮೊದಲ ಎಸೆತವನ್ನು ಎದುರಿಸಿದ ಹೆಮ್ಮೆ ಗಂಗೂಲಿ ಅವರದ್ದು. ಅಂದು ಒಂದು ಸಣ್ಣ ಪ್ರಯೋಗದಂತೆ ಆರಂಭವಾದ ಈ ಟೂರ್ನಿ, ಇಂದು ಜಾಗತಿಕ ಮಟ್ಟದಲ್ಲಿ ತಲುಪಿರುವ ಎತ್ತರ ಅಸಾಧಾರಣವಾದದ್ದು ಎಂದಿದ್ದಾರೆ. ಕ್ರಿಕೆಟ್ ಆಟ ಎಷ್ಟು ವೇಗವಾಗಿ ವಿಸ್ತರಿಸುತ್ತಿದೆ ಎಂಬುದಕ್ಕೆ ಈ ಹೂಡಿಕೆಗಳೇ ಸಾಕ್ಷಿ. ಅಮೆರಿಕದ ವಾಲ್‌ಮಾರ್ಟ್‌ನ ರಾಬ್ ವಾಲ್ಟನ್ ಮತ್ತು ಹ್ಯಾಂಪ್ ಕುಟುಂಬದಂತಹ ಘಟಾನುಘಟಿಗಳು ಭಾರತೀಯ ಕ್ರಿಕೆಟ್ ಮೇಲೆ ಆಸಕ್ತಿ ತೋರುತ್ತಿರುವುದು, ಸಾಂಪ್ರದಾಯಿಕ ಕ್ರಿಕೆಟ್ ಮಾರುಕಟ್ಟೆಯನ್ನು ಮೀರಿ ಐಪಿಎಲ್‌ನ ವ್ಯಾಪ್ತಿ ಬೆಳೆದಿರುವುದನ್ನು ತೋರಿಸುತ್ತದೆ.
ಜಾಗತಿಕ ಲೀಗ್‌ಗಳಿಗೆ ಪ್ರಬಲ ಪೈಪೋಟಿ
ಕೇವಲ ಎರಡುವರೆ ತಿಂಗಳ ಕಾಲ ನಡೆಯುವ ಐಪಿಎಲ್, ಆರ್ಥಿಕವಾಗಿ ಮತ್ತು ಜನಪ್ರಿಯತೆಯ ದೃಷ್ಟಿಯಿಂದ ಪ್ರಪಂಚದ ಅತಿ ದೊಡ್ಡ ಲೀಗ್‌ಗಳನ್ನು ಮೀರಿಸುವ ಹಾದಿಯಲ್ಲಿದೆ ಎಂದು ಗಂಗೂಲಿ ವಿಶ್ಲೇಷಿಸಿದ್ದಾರೆ. ಪ್ರಸಾರ ಹಕ್ಕುಗಳ (ಬ್ರಾಡ್‌ಕಾಸ್ಟ್ ರೈಟ್ಸ್) ವಿಚಾರದಲ್ಲಂತೂ ಐಪಿಎಲ್ ವಿಶ್ವದ ಯಾವುದೇ ಲೀಗ್‌ಗೆ ಕಮ್ಮಿ ಇಲ್ಲ; ಫುಟ್ಬಾಲ್ ಲೀಗ್‌ಗಳಿಗಿಂತಲೂ ಇದು ಮುಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇಪಿಎಲ್‌ನಂತಹ ಲೀಗ್‌ಗಳು ವರ್ಷದಲ್ಲಿ ಸುಮಾರು ಆರು ತಿಂಗಳುಗಳ ಕಾಲ ನಡೆದರೆ, ಐಪಿಎಲ್ ಕೇವಲ ಎರಡು ತಿಂಗಳಲ್ಲಿ ಅಷ್ಟೇ ಪ್ರಮಾಣದ ಜನಪ್ರಿಯತೆ ಮತ್ತು ಆದಾಯವನ್ನು ಗಳಿಸುತ್ತಿರುವುದು ಇದರ ದೈತ್ಯ ಶಕ್ತಿಗೆ ಕನ್ನಡಿಯಾಗಿದೆ.
ಅಮೆರಿಕದ ಕ್ರೀಡಾ ಫ್ರಾಂಚೈಸಿಗಳಾದ ಚೆಲ್ಸಿಯಾ (ಅಂದಾಜು 5.34 ಲಕ್ಷ ಕೋಟಿ ರೂ.) ಮತ್ತು ಲಾಸ್ ಏಂಜಲೀಸ್ ಲೇಕರ್ಸ್ (ಅಂದಾಜು 10 ಬಿಲಿಯನ್ ಡಾಲರ್) ಮಾರಾಟದಂತಹ ಜಾಗತಿಕ ಮಟ್ಟದ ಬೃಹತ್ ಒಪ್ಪಂದಗಳ ಸಾಲಿನಲ್ಲಿ ಈಗ ಐಪಿಎಲ್ ಫ್ರಾಂಚೈಸಿಗಳೂ ಕಾಣಿಸಿಕೊಳ್ಳುತ್ತಿರುವುದು ಭಾರತೀಯ ಕ್ರೀಡಾ ಕ್ಷೇತ್ರದ ವಾಣಿಜ್ಯ ಯಶಸ್ಸಿನ ಮೈಲಿಗಲ್ಲಾಗಿದೆ. ಒಟ್ಟಾರೆಯಾಗಿ, ಐಪಿಎಲ್ ಕೇವಲ ಕ್ರಿಕೆಟ್ ಹಬ್ಬವಾಗಿರದೆ, ವಿಶ್ವದ ಅತ್ಯಂತ ಪ್ರಬಲ ಕ್ರೀಡಾ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂಬುದನ್ನು ಗಂಗೂಲಿಯವರ ಮಾತುಗಳು ಪುಷ್ಟೀಕರಿಸಿವೆ.
ಇದನ್ನೂ ಓದಿ : ಭೀಕರ ಅಪಘಾತ.. ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಖ್ಯಾತಿಯ ಬಾವತೀಶ್ ಸಾವು!



















