ನವದೆಹಲಿ: ಡಿಸೆಂಬರ್ 16 ರಂದು ನಡೆಯಲಿರುವ 2ಹ026ರ ಐಪಿಎಲ್ ಮಿನಿ ಹರಾಜಿಗೂ (Mini Auction) ಮುನ್ನ ಪಂಜಾಬ್ ಕಿಂಗ್ಸ್ ತಂಡವು ತನ್ನ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸೇರಿದಂತೆ ಪ್ರಮುಖ ವಿದೇಶಿ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದೆ. ಈ ಅಚ್ಚರಿಯ ನಿರ್ಧಾರದ ಹಿಂದಿರುವ ಬಲವಾದ ಕಾರಣವನ್ನು ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಇದೀಗ ಬಹಿರಂಗಪಡಿಸಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡವು ಮ್ಯಾಕ್ಸ್‌ವೆಲ್ ಅವರಲ್ಲದೆ, ಆರೋನ್ ಹಾರ್ಡಿ ಮತ್ತು ಜಾಶ್ ಇಂಗ್ಲಿಸ್ ಅವರನ್ನೂ ತಂಡದಿಂದ ಕೈಬಿಟ್ಟಿತ್ತು. ತಂಡದ ಸಮತೋಲನ ಮತ್ತು ವಿದೇಶಿ ಆಟಗಾರರ ಸ್ಲಾಟ್‌ಗಳ ಹೊಂದಾಣಿಕೆಯೇ ಇದಕ್ಕೆ ಮುಖ್ಯ ಕಾರಣ ಎಂದು ಪಾಂಟಿಂಗ್ ಸ್ಪಷ್ಟಪಡಿಸಿದ್ದಾರೆ.
ವಿದೇಶಿ ಕೋಟಾ ಮರುಹೊಂದಾಣಿಕೆ ಅನಿವಾರ್ಯ
ಈ ಬಗ್ಗೆ ಮಾತನಾಡಿರುವ ಪಾಂಟಿಂಗ್, “ಮಿನಿ ಹರಾಜಿಗೂ ಮುನ್ನ ವಿದೇಶಿ ಆಟಗಾರರ ಸ್ಥಾನಗಳನ್ನು (Overseas Slots) ಮುಕ್ತಗೊಳಿಸುವುದು ನಮಗೆ ನಿರ್ಣಾಯಕವಾಗಿತ್ತು. ಹರಾಜಿನಲ್ಲಿ ನಾವು ಗುರುತಿಸಿರುವ ನಿರ್ದಿಷ್ಟ ಆಟಗಾರರನ್ನು ಖರೀದಿಸಲು ಮತ್ತು ತಂಡವನ್ನು ಸಮತೋಲಿತವಾಗಿ ಕಟ್ಟಲು ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು,” ಎಂದು ತಿಳಿಸಿದ್ದಾರೆ.
ಮ್ಯಾಕ್ಸ್‌ವೆಲ್ ರಿಲೀಸ್‌ಗೆ ಕಾರಣವೇನು?
ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಕೈಬಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಪಾಂಟಿಂಗ್, “ಮ್ಯಾಕ್ಸ್‌ವೆಲ್ ಓರ್ವ ದೊಡ್ಡ ಆಟಗಾರ ಮತ್ತು ನಾನು ಅವರೊಂದಿಗೆ ದೀರ್ಘಕಾಲ ಕೆಲಸ ಮಾಡಿದ್ದೇನೆ. ಆದರೆ, ಕಳೆದ ಸೀಸನ್‌ನಲ್ಲಿ ಅವರಿಂದ ನಾವು ನಿರೀಕ್ಷಿಸಿದ ಪ್ರದರ್ಶನ ಬರಲಿಲ್ಲ. ತಂಡದಲ್ಲಿ ಬದಲಾವಣೆ ತರಲು ನಾವು ಬಯಸಿದ್ದೆವು. ಹಾಗಾಗಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು,” ಎಂದು ವಿವರಿಸಿದ್ದಾರೆ.
ಅಂಕಿಅಂಶಗಳ ಪ್ರಕಾರ, 2025ರ ಐಪಿಎಲ್‌ನಲ್ಲಿ ಮ್ಯಾಕ್ಸ್‌ವೆಲ್ ಆಡಿದ 7 ಪಂದ್ಯಗಳಲ್ಲಿ ಕೇವಲ 8ರ ಸರಾಸರಿಯಲ್ಲಿ 48 ರನ್ ಗಳಿಸಿದ್ದರು ಮತ್ತು ಬೌಲಿಂಗ್‌ನಲ್ಲಿಯೂ ಕೇವಲ 4 ವಿಕೆಟ್ ಪಡೆದು ನಿರಾಸೆ ಮೂಡಿಸಿದ್ದರು.
ಇಂಗ್ಲಿಸ್ ಅಲಭ್ಯತೆ, ಹಾರ್ಡಿಗೆ ಅವಕಾಶದ ಕೊರತೆ
ವಿಕೆಟ್ ಕೀಪರ್ ಬ್ಯಾಟರ್ ಜಾಶ್ ಇಂಗ್ಲಿಸ್ ಬಗ್ಗೆ ಮಾತನಾಡಿದ ಕೋಚ್, “ಕಳೆದ ಟೂರ್ನಿಯ ದ್ವಿತೀಯಾರ್ಧದಲ್ಲಿ ಇಂಗ್ಲಿಸ್ ಅದ್ಭುತ ಇನಿಂಗ್ಸ್ ಆಡಿದ್ದರು. ಆದರೆ, ಮುಂದಿನ ಸೀಸನ್‌ನ ಬಹುತೇಕ ಪಂದ್ಯಗಳಿಗೆ ಅವರು ಲಭ್ಯವಿರುವುದಿಲ್ಲ ಎಂಬುದು ನಮಗೆ ತಿಳಿದುಬಂದಿದೆ. ಹೀಗಾಗಿ ಅವರನ್ನು ಬಿಡುಗಡೆ ಮಾಡಲಾಗಿದೆ,” ಎಂದರು. ಇದೇ ವೇಳೆ, ಮತ್ತೊಬ್ಬ ಆಲ್‌ರೌಂಡರ್ ಆರೋನ್ ಹಾರ್ಡಿ ಅವರಿಗೆ ಕಳೆದ ಬಾರಿ ಹೆಚ್ಚು ಅವಕಾಶ ನೀಡಲು ಸಾಧ್ಯವಾಗಿರಲಿಲ್ಲ, ವಿದೇಶಿ ಸ್ಲಾಟ್ ಖಾಲಿ ಮಾಡುವ ಉದ್ದೇಶದಿಂದ ಅವರನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.
ಪಂಜಾಬ್ ಪರ್ಸ್‌ನಲ್ಲಿ ಎಷ್ಟಿದೆ ಹಣ?
ಮ್ಯಾಕ್ಸ್‌ವೆಲ್, ಹಾರ್ಡಿ ಮತ್ತು ಇಂಗ್ಲಿಸ್ ಅವರಲ್ಲದೆ, ಭಾರತೀಯ ಬೌಲರ್‌ಗಳಾದ ಕುಲ್ದೀಪ್ ಸೇನ್ ಮತ್ತು ಪ್ರವೀಣ್ ದುಬೆ ಅವರನ್ನು ಪಂಜಾಬ್ ರಿಲೀಸ್ ಮಾಡಿದೆ. ಪ್ರಸ್ತುತ ಪಂಜಾಬ್ ಕಿಂಗ್ಸ್ ಬಳಿ ಹರಾಜಿಗಾಗಿ 11.50 ಕೋಟಿ ರೂ. ಮೊತ್ತ ಬಾಕಿ ಉಳಿದಿದೆ.
ಇದನ್ನೂ ಓದಿ: ಇಂದು ತಡರಾತ್ರಿ ಭಾರತಕ್ಕೆ ಬರಲಿದ್ದಾರೆ ಫುಟ್‌ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿ



















