ನವದೆಹಲಿ: ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಿನಿ ಹರಾಜಿಗಾಗಿ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಶನಿವಾರ ತನ್ನ ಅಂತಿಮ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಒಟ್ಟು 17 ಆಟಗಾರರನ್ನು ಉಳಿಸಿಕೊಂಡಿರುವ ಆರ್‌ಸಿಬಿ, 8 ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದೆ.
ಕನ್ನಡಿಗ ಮಯಾಂಕ್‌ಗೆ ಅಚ್ಚರಿಯ ಗೇಟ್‌ಪಾಸ್
2025ರ ಐಪಿಎಲ್ ಟೂರ್ನಿಯ ಪ್ಲೇಆಫ್ಸ್ ಹಂತದಲ್ಲಿ ಆರ್‌ಸಿಬಿ ತಂಡ ಸೇರಿಕೊಂಡಿದ್ದ ಕನ್ನಡಿಗ ಹಾಗೂ ಅನುಭವಿ ಆಟಗಾರ ಮಯಾಂಕ್ ಅಗರ್ವಾಲ್ ಅವರನ್ನು ಬಿಡುಗಡೆ ಮಾಡುವ ಮೂಲಕ ಬೆಂಗಳೂರು ಫ್ರಾಂಚೈಸಿ ಅಚ್ಚರಿ ಮೂಡಿಸಿದೆ. ಮಯಾಂಕ್ ಜೊತೆಗೆ, ಮತ್ತೊಬ್ಬ ಕನ್ನಡಿಗ ಮನೋಜ್ ಭಾಂಡಗೆ ಅವರಿಗೂ ತಂಡದಿಂದ ಗೇಟ್‌ಪಾಸ್ ನೀಡಲಾಗಿದೆ. ಇಂಗ್ಲೆಂಡ್‌ನ ಸ್ಫೋಟಕ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ಬಿಡುಗಡೆಯಾದ ಪ್ರಮುಖ ಆಟಗಾರರಲ್ಲಿ ಸೇರಿದ್ದಾರೆ.
ಆರ್‌ಸಿಬಿ ಆಟಗಾರರ ಸಂಪೂರ್ಣ ಪಟ್ಟಿ
ಉಳಿಸಿಕೊಂಡ ಆಟಗಾರರು (17):
- ಬ್ಯಾಟರ್ಸ್: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್ (ವಿಕೆಟ್ ಕೀಪರ್).
- ವಿಕೆಟ್ ಕೀಪರ್: ಜಿತೇಶ್ ಶರ್ಮಾ.
- ಆಲ್‌ರೌಂಡರ್‌ಗಳು: ಕೃಣಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್.
- ಬೌಲರ್‌ಗಳು: ಜಾಶ್ ಹೇಝಲ್‌ವುಡ್, ಯಶ್ ದಯಾಳ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಸಿಖ್ ದಾರ್, ಅಭಿನಂದನ್ ಸಿಂಗ್, ಸುಯಾಶ್ ಶರ್ಮಾ.
ಬಿಡುಗಡೆ ಮಾಡಿದ ಆಟಗಾರರು - ಸ್ವಸ್ತಿಕ್ ಚಿಕಾರ, ಮಯಾಂಕ್ ಅಗರ್ವಾಲ್, ಟಿಮ್ ಸೀಫರ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಮನೋಜ್ ಭಾಂಡಗೆ, ಲುಂಗಿ ಎನ್ಗಿಡಿ, ಬ್ಲೆಸಿಂಗ್ ಮುಝರಬಾನಿ, ಮೋಹಿತ್ ರಾಥೆ.
ಹರಾಜಿಗೆ ಲಭ್ಯವಿರುವ ಮೊತ್ತ: - ₹16.40 ಕೋಟಿ
ಬಲಿಷ್ಠ ತಂಡವನ್ನು ಉಳಿಸಿಕೊಂಡಿದ್ದೇವೆ: ಆಂಡಿ ಫ್ಲವರ್
ಆಟಗಾರರ ಪಟ್ಟಿಯ ಬಗ್ಗೆ ಪ್ರತಿಕ್ರಿಯಿಸಿದ ಆರ್‌ಸಿಬಿ ಮುಖ್ಯ ಕೋಚ್ ಆಂಡಿ ಫ್ಲವರ್, “ನಾವು ಅತ್ಯಂತ ಬಲಿಷ್ಠ ತಂಡವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಇತ್ತೀಚೆಗೆ ಪ್ರಶಸ್ತಿ ಗೆದ್ದಿರುವ ಮತ್ತು ಅತ್ಯುತ್ತಮ ಕ್ರಿಕೆಟ್ ಆಡಿರುವ ಇತಿಹಾಸ ನಮ್ಮ ತಂಡಕ್ಕಿದೆ. ಬಿಡುಗಡೆಯಾದ ಆಟಗಾರರ ಬಗ್ಗೆ ನನಗೆ ಸಹಾನುಭೂತಿ ಇದೆ. ಖಂಡಿತವಾಗಿಯೂ, ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿರುವ ಹರಾಜಿನಲ್ಲಿ, ನಮ್ಮ ತಂಡವನ್ನು ಮತ್ತಷ್ಟು ಬಲಪಡಿಸಲು ಎದುರು ನೋಡುತ್ತಿದ್ದೇವೆ,” ಎಂದು ಹೇಳಿದ್ದಾರೆ.
“ಸದ್ಯ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೇರಿದಂತೆ, ಐಪಿಎಲ್‌ಗೂ ಮುನ್ನ ನಡೆಯುವ ಎಲ್ಲಾ ಕ್ರಿಕೆಟ್ ಪಂದ್ಯಗಳ ಮೇಲೆ ನಾವು ತೀವ್ರ ನಿಗಾ ಇಡುತ್ತೇವೆ. ಆಟಗಾರರ ಪ್ರದರ್ಶನವನ್ನು ಗಮನಿಸಿ, ನಮ್ಮ ತಂಡಕ್ಕೆ ಅಗತ್ಯವಿರುವವರನ್ನು ಸೇರಿಸಿಕೊಳ್ಳುತ್ತೇವೆ,” ಎಂದು ಫ್ಲವರ್ ತಿಳಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ 2026 : ಆಟಗಾರರ ರೀಟೆನ್ಷನ್ ಸಂಪೂರ್ಣ ಪಟ್ಟಿ! ಯಾವ ತಂಡಕ್ಕೆ ಯಾರು? ಯಾರಿಗೆ ಕೊಕ್?



















