ಲಕ್ನೋ : ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಸೀಸನ್‌ಗಾಗಿ ಲಕ್ನೋ ಸೂಪರ್ ಜೈಂಟ್ಸ್ (LSG) ಫ್ರಾಂಚೈಸಿ ತನ್ನ ಕೋಚಿಂಗ್ ವಿಭಾಗದಲ್ಲಿ ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆ ನಡೆಸಿದೆ. ವಿಶ್ವದ ಶ್ರೇಷ್ಠ ಫೀಲ್ಡರ್ ಎಂದು ಖ್ಯಾತರಾಗಿರುವ ಜಾಂಟಿ ರೋಡ್ಸ್ ಅವರ ಸೇವೆಯನ್ನು ಅಂತ್ಯಗೊಳಿಸಿರುವ ತಂಡ, ಅವರ ಸ್ಥಾನಕ್ಕೆ ಭಾರತದ ಅನುಭವಿ ಕೋಚ್ ಅಭಯ್ ಶರ್ಮಾ ಅವರನ್ನು ನೇಮಕ ಮಾಡಿದೆ.
2023ರಿಂದ 2025ರವರೆಗೆ ಲಕ್ನೋ ತಂಡದ ಫೀಲ್ಡಿಂಗ್ ಕೋಚ್ ಆಗಿ ಜಾಂಟಿ ರೋಡ್ಸ್ ಕಾರ್ಯನಿರ್ವಹಿಸಿದ್ದರು. ಆದರೆ, ಕಳೆದ 2025ರ ಐಪಿಎಲ್ ಸೀಸನ್‌ನಲ್ಲಿ ಲಕ್ನೋ ತಂಡದ ಫೀಲ್ಡಿಂಗ್ ಅತ್ಯಂತ ಕಳಪೆಯಾಗಿತ್ತು. ಅಂಕಿಅಂಶಗಳ ಪ್ರಕಾರ, ಮೊದಲ 9 ಪಂದ್ಯಗಳಲ್ಲೇ ಲಕ್ನೋ ಆಟಗಾರರು 14 ಕ್ಯಾಚ್‌ಗಳನ್ನು ಕೈಬಿಟ್ಟಿದ್ದರು ಮತ್ತು 22 ರನ್-ಔಟ್ ಅವಕಾಶಗಳನ್ನು ಮಿಸ್ ಮಾಡಿಕೊಂಡಿದ್ದರು. ತಂಡವು ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದ್ದಕ್ಕೆ ಈ ಕಳಪೆ ಫೀಲ್ಡಿಂಗ್ ಕೂಡ ಪ್ರಮುಖ ಕಾರಣವಾಗಿತ್ತು. ಹೀಗಾಗಿ ಸಂಜೀವ್ ಗೋಯೆಂಕಾ ಮಾಲೀಕತ್ವದ ತಂಡವು ಬದಲಾವಣೆಯ ಹಾದಿ ತುಳಿದಿದೆ.
ಯಾರು ಈ ಅಭಯ್ ಶರ್ಮಾ?
ದೆಹಲಿ ಮೂಲದ ಅಭಯ್ ಶರ್ಮಾ ಅವರು ಭಾರತೀಯ ಕ್ರಿಕೆಟ್‌ನಲ್ಲಿ ದಶಕಗಳ ಕಾಲ ತರಬೇತುದಾರರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ಲಕ್ನೋ ತಂಡದ ನಾಯಕ ರಿಷಬ್ ಪಂತ್, ಶುಭಮನ್ ಗಿಲ್, ಅರ್ಶದೀಪ್ ಸಿಂಗ್ ಮತ್ತು ಯಶಸ್ವಿ ಜೈಸ್ವಾಲ್ ಅವರಂತಹ ಆಟಗಾರರು ಜೂನಿಯರ್ ಮಟ್ಟದಲ್ಲಿದ್ದಾಗ ಅಭಯ್ ಶರ್ಮಾ ಅವರಿಂದಲೇ ತರಬೇತಿ ಪಡೆದಿದ್ದರು.
2016, 2018 ಮತ್ತು 2020ರ ಅಂಡರ್-19 ವಿಶ್ವಕಪ್‌ಗಳಲ್ಲಿ ಭಾರತೀಯ ತಂಡದ ಸಪೋರ್ಟ್ ಸ್ಟಾಫ್ ಆಗಿ ಇವರು ಕೆಲಸ ಮಾಡಿದ್ದರು. ವಿಶೇಷವಾಗಿ 2018ರಲ್ಲಿ ಪೃಥ್ವಿ ಶಾ ನಾಯಕತ್ವದಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಇವರೇ ಫೀಲ್ಡಿಂಗ್ ಕೋಚ್ ಆಗಿದ್ದರು. ಭಾರತ ಮಹಿಳಾ ತಂಡ ಹಾಗೂ ಉಗಾಂಡ ರಾಷ್ಟ್ರೀಯ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿಯೂ ಇವರು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಹೊಸ ರೂಪ ಪಡೆಯುತ್ತಿರುವ ಲಕ್ನೋ ಸೂಪರ್ ಜೈಂಟ್ಸ್
ಕೇವಲ ಫೀಲ್ಡಿಂಗ್ ಕೋಚ್ ಮಾತ್ರವಲ್ಲದೆ, ಲಕ್ನೋ ತಂಡವು ಈ ಬಾರಿ ಹಲವು ದಿಗ್ಗಜರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಟಾಮ್ ಮೂಡಿ ಅವರನ್ನು ಗ್ಲೋಬಲ್ ಡೈರೆಕ್ಟರ್ ಆಗಿ ಮತ್ತು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಅವರನ್ನು ಕಾರ್ಯತಂತ್ರದ ಸಲಹೆಗಾರರನ್ನಾಗಿ (Strategic Advisor) ನೇಮಕ ಮಾಡಲಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಲಕ್ನೋ ಫ್ರಾಂಚೈಸಿ, ಹೊಸ ಕೋಚಿಂಗ್ ಬಳಗದೊಂದಿಗೆ 2026ರಲ್ಲಿ ಚೊಚ್ಚಲ ಟ್ರೋಫಿ ಗೆಲ್ಲುವ ಗುರಿ ಹೊಂದಿದೆ.
ಇದನ್ನೂ ಓದಿ : ಅಮ್ಮನಿಗೆ “ಐ ಲವ್ ಯೂ” ಎಂದು ಸಂದೇಶ ಕಳುಹಿಸಿ ಪ್ರಾಣ ಬಿಟ್ಟ ಯೂಟ್ಯೂಬರ್


















