ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಇತಿಹಾಸದಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ನೂತನ ದಾಖಲೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಬರೆದಿದ್ದಾರೆ.
ಶುಕ್ರವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಣ 2025ರ ಐಪಿಎಲ್ ಟೂರ್ನಿಯ ಎಂಟನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಸಾಧನೆಯನ್ನು ಮಾಡಿದ್ದಾರೆ. ಆ ಮೂಲಕ ಟೀಮ್ ಇಂಡಿಯಾ ಮಾಜಿ ಆರಂಬಿಕ ಶಿಖರ್ ಧವನ್ ಅವರನ್ನು ವಿರಾಟ್ ಕೊಹ್ಲಿ ಹಿಂದಿಕ್ಕಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಣ ಪಂದ್ಯಕ್ಕೂ ಮುನ್ನ ಈ ದಾಖಲೆ ಬರೆಯಲು ವಿರಾಟ್ ಕೊಹ್ಲಿಗೆ ಕೇವಲ ನಾಲ್ಕು ರನ್ ಅಗತ್ಯವಿತ್ತು. ಅದರಂತೆ ಶುಕ್ರವಾರದ ಪಂದ್ಯದಲ್ಲಿ ಕೇವಲ ನಾಲ್ಕು ರನ್ ಗಳಿಸುತ್ತಿದ್ದಂತೆ ವಿರಾಟ್ ಕೊಹ್ಲಿ, ಶಿಖರ್ ಧವನ್ ಅವರನ್ನು ಹಿಂದಿಕ್ಕಿದರು. ಟೀಮ್ ಇಂಡಿಯಾ ಮಾಜಿ ಆರಂಭಿಕ ಶಿಖರ್ ಧವನ್, ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಸಿಎಸ್‌ಕೆ ವಿರುದ್ದ 1057 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಚೆನ್ನೈ ವಿರುದ್ಧ ಐಪಿಎಲ್ ಟೂರ್ನಿಯಲ್ಲಿ 1085 ರನ್‌ಗಳನ್ನು ಗಳಿಸಿದ್ದಾರೆ.
ಪಂದ್ಯ ಹೇಗೆ ನಡೆಯಿತು?
‘ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ಕೆ ಮಾಡಿಕೊಂಡು ಗೆಲುವಿನ ವಿಶ್ವಾಸದಲ್ಲಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡವು ರಜತ್ ಪಾಟೀದಾರ್ ಅವರ ಆಕರ್ಷಕ ಅರ್ಧಶತಕ (51 ರನ್) ಮತ್ತು ಸಾಂಘಿಕ ಬ್ಯಾಟಿಂಗ್ ಪ್ರದರ್ಶನದೊಂದಿಗೆ 7 ವಿಕೆಟ್ ಕಳೆದುಕೊಂಡು 196 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಫಿಲ್ ಸಾಲ್ಟ್ 32 ರನ್, ವಿರಾಟ್ ಕೊಹ್ಲಿ 31 ರನ್, ಮತ್ತು ದೇವದತ್ ಪಡಿಕ್ಕಲ್ 27 ರನ್‌ಗಳೊಂದಿಗೆ ತಂಡಕ್ಕೆ ಭದ್ರ ಆರಂಭ ಒದಗಿಸಿದರು. ಕೊನೆಯ ಓವರ್‌ನಲ್ಲಿ ಟಿಮ್ ಡೇವಿಡ್ ಹೊಡೆದ ಹ್ಯಾಟ್ರಿಕ್ ಸಿಕ್ಸರ್ ಸೇರಿದಂತೆ 22 ರನ್‌ಗಳು ಮೊತ್ತವನ್ನು ದೊಡ್ಡದಾಗಿಸುವಲ್ಲಿ ನಿರ್ಣಾಯಕವಾದವು.
ಗುರಿ ಬೆನ್ನತ್ತಿದ ಸಿಎಸ್‌ಕೆ ತಂಡವು ಆರಂಭದಿಂದಲೇ ಒತ್ತಡಕ್ಕೆ ಸಿಲುಕಿತು. 146 ರನ್‌ಗಳಿಗೆ ಆಲೌಟ್ ಆಗಿ 50 ರನ್‌ಗಳಿಂದ ಸೋತಿತು. ಎರಡನೇ ಓವರ್‌ನಿಂದಲೇ ವಿಕೆಟ್‌ಗಳ ಪತನ ಶುರುವಾಯಿತು. ರಾಹುಲ್ ತ್ರಿಪಾಠಿ 5 ರನ್, ದೀಪಕ್ ಹೂಡಾ 4 ರನ್, ಮತ್ತು ಸ್ಯಾಮ್ ಕರನ್ 8 ರನ್‌ಗಳಿಗೆ ಔಟಾದರು. ನಾಯಕ ರುತುರಾಜ್ ಗಾಯಕ್ವಾಡ್ ಚೆಪಾಕ್‌ನಲ್ಲಿ ಮೊದಲ ಬಾರಿಗೆ ಡಕೌಟ್ ಆಗಿ ತಂಡಕ್ಕೆ ಆರಂಭಿಕ ಆಘಾತ ಒಡ್ಡಿದರು. ಶಿವಮ್ ದುಬೆ 19 ರನ್ ಮತ್ತು ರವೀಂದ್ರ ಜಡೇಜಾ 25 ರನ್ ಗಳಿಸಿದರೂ ಗುರಿಯ ಸನಿಹಕ್ಕೂ ತಂಡವನ್ನು ಕೊಂಡೊಯ್ಯಲಾಗಲಿಲ್ಲ. ಕೊನೆಯಲ್ಲಿ ಎಂಎಸ್ ಧೋನಿ 16 ಎಸೆತಗಳಲ್ಲಿ 30 ರನ್ ಗಳಿಸಿ ಅಭಿಮಾನಿಗಳಿಗೆ ಸಣ್ಣ ರಂಜನೆ ಒದಗಿಸಿದರೂ, ಸೋಲನ್ನು ತಡೆಯಲಾಗಲಿಲ್ಲ.