ಮುಲ್ಲನ್ಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಗುರುವಾರ ಮುಲ್ಲನ್ಪುರದಲ್ಲಿ ನಡೆದ ಐಪಿಎಲ್ 2025 ಕ್ವಾಲಿಫೈಯರ್ 1ರಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಪಿಬಿಕೆಎಸ್ ಐಪಿಎಲ್ ಪ್ಲೇಆಫ್ ಇತಿಹಾಸದಲ್ಲಿ ಎರಡನೇ ಕನಿಷ್ಠ ಒಟ್ಟು ರನ್ಗಳ ದಾಖಲೆಯನ್ನು ಬರೆಯುವ ಮೂಲಕ ಕಳಪೆ ದಾಖಲೆ ಸೃಷ್ಟಿಸಿತು.
ಸುಯಾಶ್ ಶರ್ಮಾ ಮತ್ತು ಜೋಶ್ ಹೇಜಲ್ವುಡ್ ತಲಾ ಮೂರು ವಿಕೆಟ್ಗಳನ್ನು ಕಬಳಿಸಿ ಪಿಬಿಕೆಎಸ್ ಬ್ಯಾಟಿಂಗ್ ವಿಭಾಗವನ್ನು ಸಂಪೂರ್ಣವಾಗಿ ಹಾಳು ಮಾಡಿದರು. ಪಂಜಾಬ್ ಕೇವಲ 14.1 ಓವರ್ಗಳಲ್ಲಿ 101 ರನ್ಗಳಿಗೆ ಆಲೌಟ್ ಆಗಿ, ಐಪಿಎಲ್ ಪ್ಲೇಆಫ್ ಇತಿಹಾಸದಲ್ಲಿ ಕನಿಷ್ಠ ಓವರ್ಗಳಲ್ಲಿ ಇನಿಂಗ್ಸ್ ಮುಗಿಸಿದ ದಾಖಲೆಯನ್ನೂ ಬರೆಯಿತು.
ಮುಲ್ಲನ್ಪುರದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಆರಂಭದಿಂದಲೇ ಪಂಜಾಬ್ ಕಿಂಗ್ಸ್ ಮೇಲೆ ಒತ್ತಡ ಹೇರಿತು. ಎರಡನೇ ಓವರ್ನಲ್ಲಿಯೇ ಫಾರ್ಮ್ನಲ್ಲಿದ್ದ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡುವ ಮೂಲಕ ಮುನ್ನಡೆ ಸಾಧಿಸಿತು. ಆ ನಂತರ, ಪಿಬಿಕೆಎಸ್ ತಂಡದ ವಿಕೆಟ್ಗಳು ನಿಯಮಿತವಾಗಿ ಬೀಳುತ್ತಿದ್ದವು. ಪ್ರಭಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್ ಮತ್ತು ಜೋಶ್ ಇಂಗ್ಲಿಸ್ ಅವಿವೇಕದ ಶಾಟ್ಗಳನ್ನಾಡಿ ತಮ್ಮ ವಿಕೆಟ್ಗಳನ್ನು ಒಪ್ಪಿಸಿದರು,
ಮಾರ್ಕಸ್ ಸ್ಟೋಯಿನಿಸ್ 17 ಎಸೆತಗಳಲ್ಲಿ 26 ರನ್ಗಳೊಂದಿಗೆ ಸ್ವಲ್ಪ ಮಟ್ಟಿಗೆ ಆಸರೆಯಾದರೂ, ಉಳಿದ ಬ್ಯಾಟ್ಸ್ಮನ್ಗಳು ಸುಯಾಶ್ ಶರ್ಮಾ ಅವರ ಸ್ಪಿನ್ ಬಲೆಗೆ ಸಿಲುಕಿದರು. ಸುಯಾಶ್ ಒಂದೇ ಓವರ್ನಲ್ಲಿ ಶಶಾಂಕ್ ಸಿಂಗ್ ಮತ್ತು ಇಂಪ್ಯಾಕ್ಟ್ ಸಬ್ ಮುಶೀರ್ ಖಾನ್ರ ವಿಕೆಟ್ಗಳನ್ನು ಕಿತ್ತರು, ತದನಂತರ ಸ್ಟೋಯಿನಿಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಗಾಯದಿಂದ ಮರಳಿದ ಜೋಶ್ ಹೇಜಲ್ವುಡ್, ಇಂಗ್ಲಿಸ್, ಶ್ರೇಯಸ್ ಮತ್ತು ಅಜ್ಮತುಲ್ಲಾ ಒಮರ್ಜಾಯ್ರ ವಿಕೆಟ್ಗಳನ್ನು ಪಡೆದು 15ನೇ ಓವರ್ನಲ್ಲಿ ಪಿಬಿಕೆಎಸ್ ಇನಿಂಗ್ಸ್ ಮುಗಿಸಿದರು.
ಪಿಬಿಕೆಎಸ್ ತಂಡವು ಕೇವಲ 14.1 ಓವರ್ಗಳಲ್ಲಿ ಆಲೌಟ್ ಆಗಿದ್ದು, ಇದು ಐಪಿಎಲ್ ಪ್ಲೇಆಫ್ನಲ್ಲಿ ಒಂದು ತಂಡ ಬ್ಯಾಟ್ ಮಾಡಿದ ಕನಿಷ್ಠ ಪ್ರದರ್ಶನವಾಗಿದೆ.
ಐಪಿಎಲ್ ಪ್ಲೇಆಫ್ ಇತಿಹಾಸದ ಕನಿಷ್ಠ ಒಟ್ಟು ರನ್ಗಳು
- 87 – ಡಿಡಿ ವಿರುದ್ಧ ಆರ್ಆರ್, ಮುಂಬೈ ವಾಂಖೆಡೆ, 2008 ಸೆಮಿಫೈನಲ್
- 101 – ಪಿಬಿಕೆಎಸ್ ವಿರುದ್ಧ ಆರ್ಸಿಬಿ, ಮುಲ್ಲನ್ಪುರ, ಕ್ವಾಲಿಫೈಯರ್ 1 (2025)*
- 101 – ಎಲ್ಎಸ್ಜಿ ವಿರುದ್ಧ ಎಂಐ, ಚೆನ್ನೈ, 2023 ಎಲಿಮಿನೇಟರ್
- 104 – ಡೆಕ್ಕನ್ ಚಾರ್ಜರ್ಸ್ ವಿರುದ್ಧ ಸಿಎಸ್ಕೆ, ಡಿವೈ ಪಾಟೀಲ್, 2010 ಸೆಮಿಫೈನಲ್
- 107 – ಕೆಕೆಆರ್ ವಿರುದ್ಧ ಎಂಐ, ಚಿನ್ನಸ್ವಾಮಿ, 2017 ಕ್ವಾಲಿಫೈಯರ್ 2
ಸುಯಾಶ್ ಶರ್ಮಾ ಏನಂದರು?
ಪಂದ್ಯದ ಆರ್ಸಿಬಿ ಹೀರೋ ಸುಯಾಶ್ ಶರ್ಮಾ, 3 ವಿಕೆಟ್ಗಳಿಗೆ 17 ರನ್ ನೀಡುವ ಮೂಲಕ ಗಮನ ಸೆಳೆದರು. ಪಂದ್ಯದ ಬಳಿಕ ಮಾತನಾಡಿದ ಅವರು ಕೋಚಿಂಗ್ ಸಿಬ್ಬಂದಿಯ ಯೋಜನೆಯನ್ನು ತಾವು ಯಶಸ್ವಿಯಾಗಿ ಜಾರಿಗೆ ತಂದೆವು ಎಂದು ಹೇಳಿದ್ದಾರೆ.