ಚೆನ್ನೈ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಋತುವಿನಲ್ಲಿ ಎಂಎಸ್ ಧೋನಿ ಮತ್ತೊಮ್ಮೆ ತನ್ನ ಮಿಂಚಿನಂತಹ ಸ್ಟಂಪಿಂಗ್ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಚೆನ್ನೈನ ಎಂಎ ಚಿದಂಬರಂ (ಚೆಪಾಕ್) ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧದ ಪಂದ್ಯದಲ್ಲಿ, ಧೋನಿಯ ಅದ್ಭುತ ಕೈಚಳಕದಿಂದ ಆರ್‌ಸಿಬಿ ಆರಂಭಿಕ ಆಟಗಾರ ಫಿಲ್ ಸಾಲ್ಟ್ 5ನೇ ಓವರ್‌ನಲ್ಲಿ ಸ್ಟಂಪ್ ಔಟ್ ಆದರು.
ಈ ಅದ್ಭುತ ಸ್ಟಂಪಿಂಗ್‌ಗೆ ಸ್ವಲ್ಪ ಮೊದಲೇ ಧೋನಿಯ ಖ್ಯಾತ ‘ಧೋನಿ ರಿವ್ಯೂ ಸಿಸ್ಟಮ್’ (ಡಿಆರ್‌ಎಸ್) ವಿಫಲವಾಗಿತ್ತು. ಪಂದ್ಯದ 3ನೇ ಓವರ್‌ನಲ್ಲಿ ಖಲೀಲ್ ಅಹ್ಮದ್ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುತ್ತಿದ್ದಾಗ, ಧೋನಿ ಚೆಂಡಿನ ಪಿಚ್ ಅನ್ನು ತಪ್ಪಾಗಿ ನಿರ್ಣಯಿಸಿದರು. ಇದರಿಂದ ಸಿಎಸ್‌ಕೆ ತನ್ನ ಮೊದಲ ಡಿಆರ್‌ಎಸ್ ರಿವ್ಯೂವನ್ನು ಶುಕ್ರವಾರ ಕಳೆದುಕೊಂಡಿತು. ಆದರೆ, ಧೋನಿ ತನ್ನ ತಪ್ಪನ್ನು ಶೀಘ್ರವಾಗಿ ಸರಿಪಡಿಸಿಕೊಂಡರು. ಸ್ಟಂಪ್ ಹಿಂದೆ ತನ್ನ ಮಿಂಚಿನಂತಹ ಕೌಶಲ ಪ್ರದರ್ಶಿಸಿ, ಸ್ಟಂಪ್ಔಟ್ ಮಾಡಿದರು.
ಆರ್‌ಸಿಬಿ ಆರಂಭಿಕ ಆಟಗಾರ ಫಿಲ್ ಸಾಲ್ಟ್, ನೂರ್ ಅಹ್ಮದ್ ಬೌಲಿಂಗ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ತನ್ನ ಪಾದವನ್ನು ಸ್ಟಂಪ್‌ಗಿಂತ ಮೇಲೆ ಎತ್ತಿದ್ದರು. ಆನ್-ಫೀಲ್ಡ್ ಅಂಪೈರ್‌ಗಳು ಈ ವಿಚಾರವನ್ನು ದೃಢೀಕರಿಸಲು ಮೂರನೇ ಅಂಪೈರ್‌ಗೆ ಮೊರೆ ಹೋದರು. ಕೆಲವು ಫ್ರೇಮ್‌ಗಳನ್ನು ಪರಿಶೀಲಿಸಿದ ಬಳಿಕ, ಸ್ಟಂಪ್ ಬೇರ್ಪಡುವ ಸಮಯದಲ್ಲಿ ಸಾಲ್ಟ್‌ನ ಪಾದವು ನೆಲದಿಂದ ಮೇಲೆ ಇದೆ ಎಂದು ಖಚಿತವಾಯಿತು. ಇದರೊಂದಿಗೆ ಧೋನಿಯ ಮ್ಯಾಜಿಕ್ ಸ್ಟಂಪಿಂಗ್ ಸಾಲ್ಟ್ ಅವರನ್ನು ಪೆವಿಲಿಯನ್ಗೆ ಕಳುಹಿಸಿತು.
ಈ ಋತುವಿನಲ್ಲಿ ಧೋನಿಯ ಸ್ಟಂಪಿಂಗ್ ಚಮತ್ಕಾರ
ಇದು ಈ ಋತುವಿನಲ್ಲಿ ಧೋನಿಯ ಮೊದಲ ಅದ್ಭುತ ಸ್ಟಂಪಿಂಗ್ ಅಲ್ಲ. ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು 11ನೇ ಓವರ್‌ನಲ್ಲಿ ಧೋನಿ ಚುರುಕಾಗಿ ಸ್ಟಂಪ್ ಔಟ್ ಮಾಡಿದ್ದರು. ಇದು ಐಪಿಎಲ್ ಆರಂಭಿಕ ಪಂದ್ಯದಲ್ಲಿ ಎದುರಾಳಿ ತಂಡವನ್ನು ತೊಂದರೆಗೆ ಸಿಲುಕಿಸಿತ್ತು. ಧೋನಿಯ ಈ ಕೌಶಲ್ಯವು ಈ ಋತುವಿನಲ್ಲಿ ಸತತವಾಗಿ ಎದುರಾಳಿಗಳಿಗೆ ಆಘಾತ ಒಡ್ಡುತ್ತಿದೆ.
ಮಾರ್ಕ್ ಬೌಚರ್‌ನಿಂದ ಧೋನಿಗೆ ಮೆಚ್ಚುಗೆ
ಈ ಪಂದ್ಯಕ್ಕೆ ಮೊದಲು, ಇಂಡಿಯಾ ಟುಡೇಗೆ ಮಾತನಾಡಿದ ಮಾಜಿ ವಿಕೆಟ್‌ಕೀಪರ್ ಮಾರ್ಕ್ ಬೌಚರ್, ಧೋನಿಯನ್ನು ಸ್ಟಂಪ್‌ಗೆ ಸಮೀಪವಾಗಿ ನಿಂತು ಕೀಪಿಂಗ್ ಮಾಡುವಲ್ಲಿ ಶ್ರೇಷ್ಠ ಆಟಗಾರ ಎಂದು ಬಣ್ಣಿಸಿದ್ದರು. ಐಪಿಎಲ್‌ನಲ್ಲಿ ದೊಡ್ಡ ಮೊತ್ತಗಳನ್ನು ಬೆನ್ನತ್ತುವಾಗ ಬ್ಯಾಟ್ಸ್‌ಮನ್‌ಗಳು ಅತಿ ಆಕ್ರಮಣಕಾರಿಯಾಗಿ ಆಡುವ ಈ ಋತುವಿನಲ್ಲಿ ಧೋನಿ ಸ್ಟಂಪ್ ಹಿಂದೆ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಬೌಚರ್ ಭವಿಷ್ಯ ನುಡಿದಿದ್ದರು.
“ಎಂಎಸ್ ಧೋನಿ ನನಗೆ ಒಂದು ದಂತಕತೆಯಂತೆ ಭಾಸವಾಗುತ್ತಾರೆ. ಅವರು ಐಪಿಎಲ್‌ಗಾಗಿ ತಮ್ಮ ಶಕ್ತಿ ಉಳಿಸಿಕೊಂಡಿರುವುದು ಅವರ ಸಮರ್ಪಣೆ ಮತ್ತು ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಸ್ಟಂಪ್ ಹಿಂದೆ ಅವರನ್ನು ಮೀರಿಸುವವರು ಇಲ್ಲ ಎಂದು ಬೌಚರ್ ಇಂಡಿಯಾ ಟುಡೇನ ಅಕ್ಷಯ್ ರಮೇಶ್‌ಗೆ ತಿಳಿಸಿದ್ದರು.
“ಸ್ಟಂಪ್‌ಗೆ ಸಮೀಪವಾಗಿ ನಿಂತು ಕೀಪಿಂಗ್ ಮಾಡುವಲ್ಲಿ ಧೋನಿ ನಿಸ್ಸೀಮ ವಿಕೆಟ್‌ಕೀಪರ್ ಎಂದು ನಾನು ಭಾವಿಸುತ್ತೇನೆ. ಅವರ ಕೈಗಳ ವೇಗ ಅದ್ಭುತವಾಗಿವೆ. ಅವರ ತಲೆ, ಪಾದಗಳ ಚಲನೆ ಉತ್ತಮವಾಗಿದೆ. ವಿಭಿನ್ನ ಪರಿಸ್ಥಿತಿಗಳಲ್ಲಿ ಬೆಳೆದ ವಿಭಿನ್ನ ಕೀಪರ್‌ಗಳು ಇರುತ್ತಾರೆ. ಆದರೆ ಸ್ಟಂಪ್‌ಗೆ ಸಮೀಪ ನಿಂತಿರುವ ಧೋನಿಯನ್ನು ನೋಡುವುದು ಅದ್ಭುತ. ಅವರನ್ನು ನೋಡಿ ನಾನು ಬಹಳಷ್ಟು ಕಲಿತಿದ್ದೇನೆ,” ಎಂದು ಬೌಚರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಧೋನಿಯ ಕೀಪಿಂಗ್ ಮ್ಯಾಜಿಕ್
ಈ ಪಂದ್ಯದಲ್ಲಿ ಧೋನಿಯ ಸ್ಟಂಪಿಂಗ್ ಕೇವಲ ಆರ್‌ಸಿಬಿ ಆರಂಭಿಕ ಆಟಗಾರ ಫಿಲ್ ಸಾಲ್ಟ್‌ಗೆ ಆಘಾತ ಒಡ್ಡಲಿಲ್ಲ, ಬದಲಿಗೆ ಆರ್‌ಸಿಬಿಯ ಆರಂಭಿಕ ಆಕ್ರಮಣವನ್ನು ತಡೆಯುವಲ್ಲಿ ಸಿಎಸ್‌ಕೆಗೆ ಸಹಾಯ ಮಾಡಿತು. ಡಿಆರ್‌ಎಸ್‌ನಲ್ಲಿ ತಪ್ಪು ತೀರ್ಪು ನೀಡಿದ ಕೆಲವೇ ಕ್ಷಣಗಳಲ್ಲಿ ಧೋನಿ ತನ್ನ ತಪ್ಪನ್ನು ಸ್ಟಂಪ್ ಮೂಲಕ ತಪ್ಪನ್ನು ಮರೆ ಮಾಚಿದರು. ಇದು ಧೋನಿಯ ಅನುಭವ ಮತ್ತು ಶೀಘ್ರ ಪ್ರತಿಕ್ರಿಯೆಯ ಸಾಮರ್ಥ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿತು.