ರಾಮನಗರ: ರಾಮನಗರ ಪೊಲೀಸರು ರಾಜ್ಯದಾದ್ಯಂತ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಖತರ್ನಾಕ್ ಕಳ್ಳರು ಅರೆಸ್ಟ್ ಆಗಿದ್ದಾರೆ. ಸದ್ಯ 50 ಲಕ್ಷ ರೂ. ಮೌಲ್ಯದ 10 ಬೈಕ್, 3 ಕಾರು ಸೇರಿ ಹಲವು ವಾಹನಗಳು ಹಾಗೂ 4 ಲಕ್ಷ ರೂ ನಗದು ವಶಪಡಿಸಿಕೊಳ್ಳಲಾಗಿದ್ದು, ಜೊತೆಗೆ 13 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಅಂತಾರಾಜ್ಯ ಕಳ್ಳರನ್ನ ಬಂಧಿಸಿದ್ದಾರೆ. ಅಂದಹಾಗೆ ಶಿವಮೊಗ್ಗ ಮೂಲದ ಶಾಹಿದ್ ಅಹಮದ್ (27) ಹಾಗೂ ತುಮಕೂರು ಮೂಲದ ಅಪ್ಸರ್ ಅಹಮದ್ (40) ಬಂಧಿತ ಆರೋಪಿಗಳು. ಇವರಿಬ್ಬರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಾಹನ ಕಳ್ಳತನ ಮಾಡಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ 50 ಲಕ್ಷ ರೂ ಮೌಲ್ಯದ 2 ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ, 3 ಕಾರುಗಳು, 10 ದ್ವಿಚಕ್ರ ವಾಹನಗಳು ಹಾಗೂ 4 ಲಕ್ಷ ರೂ ನಗದು ವಶಕ್ಕೆ ಪಡೆದುಕೊಂಡಿದ್ದು, 13 ಪ್ರಕರಣಗಳನ್ನು ಭೇದಿಸಿದ್ದಾರೆ. ಈ ಖದೀಮರು ರಾಮನಗರ, ಮಂಡ್ಯ, ಬೆಂಗಳೂರು, ತುಮಕೂರು, ಕೋಲಾರ, ಬಳ್ಳಾರಿ ಹಾಗೂ ಹುಬ್ಬಳ್ಳಿ ನಗರಗಳಲ್ಲೂ ತಮ್ಮ ಕೈಚಳಕ ತೋರಿಸಿದ್ದಾರೆ.
ಆರೋಪಿ ಶಾಹಿದ್ ವಾಹನ ಕಳ್ಳತನ ಮಾಡಿ ಅಪ್ಸರ್‌ಗೆ ಮಾರಾಟ ಮಾಡುತ್ತಿದ್ದ. ಕೆಲವು ವಾಹನಗಳನ್ನು ಗುಜರಿಗೆ ಹಾಕಿ ಮಾರಾಟ ಮಾಡುತ್ತಿದ್ದರೆ, ಇನ್ನೂ ಕೆಲವು ವಾಹನಗಳ ಇಂಜಿನ್ ಹಾಗೂ ಚಾರ್ಸಿ ನಂಬರ್ ಬದಲಾಯಿಸಿ, ನಕಲಿ ನಂಬರ್ ಪ್ಲೇಟ್ ಅಳವಡಿಸಿ ಮಾರಾಟ ಮಾಡುತ್ತಿದ್ದರು.
ಒಂದೇ ಕಡೆ ಕಳ್ಳತನ ಮಾಡಿದರೆ ಗೊತ್ತಾಗುತ್ತದೆ ಎಂದು ಹಲವು ಜಿಲ್ಲೆಗಳಿಗೆ ಹೋಗಿ ಲಾಜ್ಡ್ಗಳಲ್ಲಿ ತಂಗಿ ವಾಹನಗಳನ್ನ ಕಳ್ಳತನ ಮಾಡುತ್ತಿದ್ದರು. ಇನ್ನು ಹೈಟೆಕ್ ತಂತ್ರಜ್ಞಾನವನ್ನ ಬಳಸಿ ಕಾರುಗಳ ಲಾಕ್ ಓಪನ್ ಮಾಡಿ ಕಳ್ಳತನ ಮಾಡುತ್ತಿದ್ದರು. ಹೀಗಾಗಿ ಇವರ ವಿರುದ್ಧ ಈ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿದ್ದವು.
ಮತ್ತೊಂಡೆದೆ ರಾಮನಗರ ಐಜೂರು ಠಾಣೆ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಮೂವರು ಆರೋಪಿಗಳನ್ನ ಬಂಧಿಸಿ ಒಂದುವರೆ ಕೋಟಿ ರೂ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದರು. ಇದೀಗ ಪ್ರಕರಣಕ್ಕೆ ಬಳಸಿಕೊಂಡಿದ್ದ ಒಂದು ಕಾರು ಹಾಗೂ ಬೈಕ್ ಅನ್ನ ವಶಕ್ಕೆ ಪಡೆದಿದ್ದಾರೆ. ಒಟ್ಟಾರೆ ಹಲವು ಜಿಲ್ಲೆಗಳಲ್ಲಿ ವಾಹನಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರ ಯಶಸ್ವಿಯಾಗಿ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು | ಚಾಕು, ಡ್ಯಾಗರ್‌ನಿಂದ ಇರಿದು ವ್ಯಕ್ತಿಯ ಬರ್ಬರ ಕೊಲೆ



















