ಅಮೃತಸರ: ಅಂತಾರಾಷ್ಟ್ರೀಯ ಡ್ರಗ್ಸ್ ದೊರೆ ಶೆಹ್ನಾಜ್ ಸಿಂಗ್ ಅಲಿಯಾಸ್ ಶಾನ್ ಬಿಂದೇರ್‌ನನ್ನು ಪಂಜಾಬ್ ಪೊಲೀಸರು ಸೋಮವಾರ ಸೆರೆಹಿಡಿದಿದ್ದಾರೆ. ಕೊಲಂಬಿಯಾ, ಅಮೆರಿಕ, ಕೆನಡಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಾದಕದ್ರವ್ಯದ ಕಳ್ಳಸಾಗಣೆಯಲ್ಲಿ ತೊಡಗಿದ್ದ ಆರೋಪ ಈತನ ಮೇಲಿದೆ. ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ(FBI)ನ ಮೋಸ್ಟ್-ವಾಂಟೆಡ್ ಪಟ್ಟಿಯಲ್ಲಿ ಇದ್ದ ಈತ, ಈಗ ಪಂಜಾಬ್ ಪೊಲೀಸರ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದಿದ್ದಾನೆ.
ಪಂಜಾಬ್ ಪೊಲೀಸ್ ಮಹಾನಿರ್ದೇಶಕರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ಫೆಬ್ರವರಿ 26ರಂದು ಅಮೆರಿಕದಲ್ಲಿ ಈತನ ಸಹಚರರನ್ನು ಬಂಧಿಸಿದ ನಂತರ, ಶೆಹ್ನಾಜ್ ಸಿಂಗ್ ಭಾರತಕ್ಕೆ ಪರಾರಿಯಾಗಿದ್ದ. ಹೀಗಾಗಿ, ಪೊಲೀಸರ ಒಂದು ವಿಶೇಷ ತಂಡ ಈತನ ಚಲನವಲನಗಳ ಮೇಲೆ ಕಣ್ಣಿಟ್ಟಿತ್ತು. ನಿಖರ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ, ಪಂಜಾಬ್‌ನಲ್ಲಿಯೇ ಈತನನ್ನು ಪತ್ತೆ ಹಚ್ಚಿ ಬಂಧಿಸಲಾಯಿತು ಎಂದಿದ್ದಾರೆ.
ಶಾನ್ ಭಿಂದೇರ್ ಎಂಬ ಹೆಸರಿನಿಂದಲೂ ಶೆಹ್ನಾಜ್ ಸಿಂಗ್ ಪರಿಚಿತನಾಗಿದ್ದ. ಈತನ ಕೆಲವು ಪ್ರಮುಖ ಸಹಚರರನ್ನು ಅಮೆರಿಕದಲ್ಲಿ ಇತ್ತೀಚೆಗೆ ಬಂಧಿಸಲಾಗಿತ್ತು. ಅಮೆರಿಕದ ಭದ್ರತಾ ಸಂಸ್ಥೆಗಳ ಕೈಗೆ ಸಿಕ್ಕಿಬಿದ್ದ ಸಹಚರರಲ್ಲಿ ಅಮೃತ್‌ಪಾಲ್ ‘ಅಮೃತ್ ಬಾಲ್’ ಸಿಂಗ್, ಅಮೃತ್‌ಪಾಲ್ ‘ಚೀಮಾ’ ಸಿಂಗ್, ತಕ್ದೀರ್ ಸಿಂಗ್ ಅಕಾ ‘ರೋಮಿ’, ಸರ್ಬ್ಸಿತ್ ಸಿಂಗ್ ಅಲಿಯಾಸ್ ‘ಸಾಬಿ’ ಮತ್ತು ಫೆರ್ನಾಂಡೋ ‘ಫ್ರಾಂಕೋ’ ವಲ್ಲಡಾರೆಸ್ ಸೇರಿದ್ದಾರೆ.
ಅಮೆರಿಕದ ಅಧಿಕಾರಿಗಳು ನಡೆಸಿದ್ದ ದಾಳಿಯ ವೇಳೆ ಆರೋಪಿಗಳಿಂದ ಭಾರಿ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. 391 ಕೆ.ಜಿ ಮೆಥಾಂಫೆಟಮೈನ್, 109 ಕೆ.ಜಿ ಕೊಕೈನ್ ಮತ್ತು ನಾಲ್ಕು ಪಿಸ್ತೂಲ್‌ಗಳನ್ನು ಬಂಧಿತರ ನಿವಾಸಗಳು ಮತ್ತು ವಾಹನಗಳಿಂದ ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ನಡೆದ ಈ ಕಾರ್ಯಾಚರಣೆಯನ್ನು “ಪಂಜಾಬ್‌ನ ಮಾದಕ ದ್ರವ್ಯ ಕುರಿತ ಶೂನ್ಯ-ಸಹಿಷ್ಣುತೆ ನೀತಿಯ ಪ್ರತೀಕ” ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕರು ಬಣ್ಣಿಸಿದ್ದಾರೆ. ಶೆಹ್ನಾಜ್ ಸಿಂಗ್ ಜಾಗತಿಕ ಮಾದಕ ದ್ರವ್ಯ ಸಾಗಣೆಯ ಪ್ರಮುಖ ಸದಸ್ಯನಾಗಿದ್ದ. ಈತನನ್ನು ಸೆರೆಹಿಡಿಯುವ ಮೂಲಕ ಪಂಜಾಬ್ ಪೊಲೀಸರಿಗೆ ಬಹುದೊಡ್ಡ ಯಶಸ್ಸು ಸಿಕ್ಕಿದೆ ಎಂದು ಹೇಳಿದ್ದಾರೆ.
“ಈತ ಕೊಲಂಬಿಯಾದ ಮಾದಕ ಜಾಲದೊಂದಿಗೆ ನೇರ ಸಂಪರ್ಕ ಹೊಂದಿದ್ದ. ಅಲ್ಲಿಂದ ಅಮೆರಿಕ ಹಾಗೂ ಕೆನಡಾಗೆ ಮಾದಕ ದ್ರವ್ಯಗಳನ್ನು ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ,” ಎಂದೂ ಅವರು ತಿಳಿಸಿದ್ದಾರೆ.
“ಪಂಜಾಬ್ ನೆಲ ಮಾದಕ ವ್ಯಪಾರಿಗಳಿಗೆ ಮತ್ತು ಅಪರಾಧಿಗಳಿಗೆ ಆಶ್ರಯವಾಗಬಾರದು ಎಂಬುದೇ ನಮ್ಮ ಉದ್ದೇಶವಾಗಿದೆ. ಈ ಪ್ರಕರಣದಲ್ಲಿ ಜಾಗತಿಕ ಕಾನೂನು ಜಾರಿ ಸಂಸ್ಥೆಗಳಿಗೂ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ,” ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.