ಮುಂಬೈ: ಭಾರತೀಯ ಕ್ರಿಕೆಟ್ ಲೋಕದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಐಷಾರಾಮಿ ಜೀವನಶೈಲಿಯಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಸುಮಾರು 1,300 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದಿರುವ ಈ ಜೋಡಿ, ಈಗ ಮುಂಬೈ ಸಮೀಪದ ಅಲಿಬಾಗ್‌ನಲ್ಲಿ ನಿರ್ಮಿಸಿಕೊಂಡಿರುವ 19 ಕೋಟಿ ರೂ. ಮೌಲ್ಯದ ಭವ್ಯ ವಿಲ್ಲಾ ಎಲ್ಲರ ಗಮನ ಸೆಳೆಯುತ್ತಿದೆ. ‘ಆವಾಸ್ ಲಿವಿಂಗ್’ ಎಂಬ ಪ್ರದೇಶದಲ್ಲಿರುವ ಈ ನಾಲ್ಕು ಬೆಡ್‌ರೂಮ್‌ಗಳ ವಿಲ್ಲಾವು ಆಧುನಿಕತೆ ಮತ್ತು ಪ್ರಕೃತಿಯ ಸೌಂದರ್ಯದ ಅಪರೂಪದ ಸಂಗಮವಾಗಿದೆ.

ಶಾಂತಿ, ನೆಮ್ಮದಿಯ ತಾಣ ‘ವೀರನ್’
ವಿರಾಟ್ ಕೊಹ್ಲಿ ಅವರ ಈ ವಿಲ್ಲಾಕ್ಕೆ ‘ವೀರನ್’ ಎಂದು ಹೆಸರಿಡಲಾಗಿದ್ದು, ಇದನ್ನು ಜಾಗತಿಕ ಮಟ್ಟದ ಇಂಟೀರಿಯರ್ ಸ್ಟೈಲಿಸ್ಟ್(ಒಳಾಂಗಣ ವಿನ್ಯಾಸಗಾರ್ತಿ) ಜಾಸ್ಮಿನ್ ಜವೇರಿ ಅವರು ವಿನ್ಯಾಸಗೊಳಿಸಿದ್ದಾರೆ. ಸುಮಾರು 10,000 ಚದರ ಅಡಿ ವಿಸ್ತೀರ್ಣದ ಈ ಮನೆಯಲ್ಲಿ ಇಟಾಲಿಯನ್ ಮಾರ್ಬಲ್ ಮತ್ತು ಟರ್ಕಿಶ್ ಸುಣ್ಣದ ಕಲ್ಲುಗಳನ್ನು ಬಳಸಲಾಗಿದೆ. ಕ್ರಿಕೆಟ್‌ನ ಒತ್ತಡದ ಬದುಕಿನಿಂದ ದೂರ ಉಳಿದು ಕುಟುಂಬದೊಂದಿಗೆ ನೆಮ್ಮದಿಯ ಸಮಯ ಕಳೆಯಲು ವಿರಾಟ್ ಈ ಮನೆಯನ್ನು ವಿಶೇಷವಾಗಿ ಸಿದ್ಧಪಡಿಸಿದ್ದಾರೆ. “ನನಗೆ ಕುಟುಂಬವೇ ಮೊದಲ ಆದ್ಯತೆ. ನನ್ನ ಮಗಳು ಬೆಳೆಯುವ ಹಂತವನ್ನು ಮಿಸ್ ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ, ಹಾಗಾಗಿ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಪಾಡಿಕೊಳ್ಳಲು ಈ ಮನೆ ಪೂರಕವಾಗಿದೆ” ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಟಿವಿ ಇಲ್ಲದ ಮನೆ; ಸಂವಹನಕ್ಕೆ ಹೆಚ್ಚಿನ ಒತ್ತು
ಈ ವಿಲ್ಲಾದ ವಿಶೇಷವೆಂದರೆ ಇಲ್ಲಿನ ಲಿವಿಂಗ್ ರೂಮ್‌ನಲ್ಲಿ ಯಾವುದೇ ಟೆಲಿವಿಷನ್ ಅಥವಾ ಮನರಂಜನಾ ಸಾಧನಗಳಿಲ್ಲ. ಕುಟುಂಬದ ಸದಸ್ಯರು ಒಬ್ಬರಿಗೊಬ್ಬರು ಮುಕ್ತವಾಗಿ ಮಾತನಾಡಬೇಕು ಮತ್ತು ಸಂವಹನ ನಡೆಸಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲಿವಿಂಗ್ ರೂಮ್ ನೇರವಾಗಿ ಡೈನಿಂಗ್ ಏರಿಯಾಗೆ ಸಂಪರ್ಕ ಹೊಂದಿದ್ದು, ಸೂರ್ಯನ ಬೆಳಕು ಮನೆಯ ತುಂಬೆಲ್ಲಾ ಹರಡುವಂತೆ ವಿನ್ಯಾಸ ಮಾಡಲಾಗಿದೆ. ಹೈ-ಟೆಕ್ ತಂತ್ರಜ್ಞಾನ ಹೊಂದಿರುವ ಈ ಮನೆಯಲ್ಲಿ ಕೇವಲ ಒಂದು ಕ್ಲಿಕ್ ಮೂಲಕ ಮನೆಯ ಲೈಟ್ಸ್ ಸೇರಿದಂತೆ ಪ್ರತಿಯೊಂದನ್ನೂ ನಿಯಂತ್ರಿಸಬಹುದಾದ ಆಟೊಮೇಷನ್ ವ್ಯವಸ್ಥೆ ಇದೆ.

ಹೊರಾಂಗಣದ ಸೌಂದರ್ಯ, ಈಜುಕೊಳ
ಮನೆಯ ಒಳಗಿನ ಅಂದದಷ್ಟೇ ಹೊರಗಿನ ವಿನ್ಯಾಸವೂ ಅದ್ಭುತವಾಗಿದೆ. ವಿಶಾಲವಾದ ಸ್ವಿಮ್ಮಿಂಗ್ ಪೂಲ್, ಅದರ ಪಕ್ಕದಲ್ಲೇ ಬೆಳಗಿನ ಕಾಫಿ ಕುಡಿಯಲು ವಿರಾಮದ ತಾಣ ಮತ್ತು ಹೊರಾಂಗಣ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಕ್ಯಾಲಿಫೋರ್ನಿಯಾ ಮತ್ತು ಕೊಂಕಣ ಶೈಲಿಯ ಮಿಶ್ರಣವಾಗಿರುವ ಈ ವಿಲ್ಲಾವು ಅಲಿಬಾಗ್‌ನ ಹಸಿರಿನ ನಡುವೆ ಒಂದು ಪುಟ್ಟ ಸ್ವರ್ಗದಂತೆ ಕಾಣಿಸುತ್ತದೆ. ಇತ್ತೀಚೆಗಷ್ಟೇ ಇದೇ ಪ್ರದೇಶದಲ್ಲಿ 32 ಕೋಟಿ ರೂಪಾಯಿ ಮೌಲ್ಯದ ಮತ್ತೊಂದು ಆಸ್ತಿಯನ್ನು ಈ ದಂಪತಿ ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬೆಂಗಳೂರು ಬಿಡುತ್ತಾ ಆರ್‌ಸಿಬಿ? ಚಿನ್ನಸ್ವಾಮಿ ಮೈದಾನಕ್ಕೆ ‘AI’ ಕವಚದ ಪ್ರಸ್ತಾಪ | ಏನಿದು ಹೈಟೆಕ್ ಪ್ಲಾನ್?


















