ನವದೆಹಲಿ : ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಳಕ್ಕೆ ನೈಸರ್ಗಿಕ ಬೆಳವಣಿಗೆಯ ದರಕ್ಕಿಂತ ಹೆಚ್ಚಾಗಿ “ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದಿಂದಾಗುತ್ತಿರುವ ಒಳನುಸುಳುವಿಕೆಯೇ” ಪ್ರಮುಖ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಜಾಗರಣ್ ಸಾಹಿತ್ಯ ಸೃಜನ್ ಸಮ್ಮಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರಾಶ್ರಿತರು ಮತ್ತು ಅಕ್ರಮ ವಲಸಿಗರ ನಡುವೆ ಸ್ಪಷ್ಟ ವ್ಯತ್ಯಾಸವಿದೆ ಎಂದು ಪ್ರತಿಪಾದಿಸಿದರು.
ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಿರುಕುಳಕ್ಕೊಳಗಾದ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರಿಗೆ ಭಾರತದ ನೆಲದ ಮೇಲೆ ನೈತಿಕ ಮತ್ತು ಸಾಂವಿಧಾನಿಕ ಹಕ್ಕಿದೆ ಎಂದು ಶಾ ಒತ್ತಿ ಹೇಳಿದರು. “ಈ ದೇಶದ ಮಣ್ಣಿನ ಮೇಲೆ ನನಗೆ ಎಷ್ಟು ಅಧಿಕಾರವಿದೆಯೋ, ಅಷ್ಟೇ ಅಧಿಕಾರ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳಿಗೂ ಇದೆ,” ಎಂದು ಅವರು ಸ್ಪಷ್ಟಪಡಿಸಿದರು.
ತಮ್ಮ ವಾದವನ್ನು ಸಮರ್ಥಿಸಲು 1951 ರಿಂದ 2011ರವರೆಗಿನ ಜನಗಣತಿ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಶಾ, ಗಮನಾರ್ಹ ಜನಸಂಖ್ಯಾ ಬದಲಾವಣೆಯನ್ನು ವಿವರಿಸಿದರು. 1951ರಲ್ಲಿ ಭಾರತದ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಶೇ. 84ರಷ್ಟಿದ್ದರೆ, 2011ರ ವೇಳೆಗೆ ಇದು ಶೇ.79ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಮುಸ್ಲಿಮರ ಪಾಲು ಶೇ. 9.8 ರಿಂದ ಶೇ. 14.2ಕ್ಕೆ ಏರಿದೆ. 2011ರ ದಶಕದ ಬೆಳವಣಿಗೆಯ ದರದಲ್ಲಿ ಮುಸ್ಲಿಂ ಜನಸಂಖ್ಯೆಯು ಶೇ. 24.6ರಷ್ಟು ಹೆಚ್ಚಾಗಿದ್ದು, ಇದಕ್ಕೆ ಫಲವತ್ತತೆಗಿಂತ ಹೆಚ್ಚಾಗಿ ದಾಖಲೆಗಳಿಲ್ಲದ ವ್ಯಕ್ತಿಗಳ ಒಳಹರಿವೇ ಕಾರಣ ಎಂದು ಶಾ ಆರೋಪಿಸಿದರು. ಪಶ್ಚಿಮ ಬಂಗಾಳದ ಗಡಿ ಜಿಲ್ಲೆಗಳಲ್ಲಿ ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆ ದರವು ಶೇ. 40 ರಿಂದ 70ರಷ್ಟು ಹೆಚ್ಚಾಗಿದೆ ಎಂದು ಅವರು ಉಲ್ಲೇಖಿಸಿದ್ದು, ಇದು ದೊಡ್ಡ ಪ್ರಮಾಣದ ಒಳನುಸುಳುವಿಕೆಗೆ ನಿರಾಕರಿಸಲಾಗದ ಪುರಾವೆಯಾಗಿದೆ ಎಂದು ಹೇಳಿದರು.
ಸಿಎಎಗೆ ಸಮರ್ಥನೆ : ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆ, 2019 (ಸಿಎಎ) ಅನ್ನು ಸಮರ್ಥಿಸಿಕೊಂಡ ಶಾ, 1947ರ ಧಾರ್ಮಿಕ ವಿಭಜನೆಯು ಹೊಸದಾಗಿ ರೂಪುಗೊಂಡ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಉಳಿದುಹೋದ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರನ್ನು ರಕ್ಷಿಸುವ ನೈತಿಕ ಹೊಣೆಗಾರಿಕೆಯನ್ನು ಭಾರತದ ಮೇಲೆ ಹೊರಿಸಿದೆ ಎಂದು ಹೇಳಿದರು. ಪಾಕಿಸ್ತಾನದಲ್ಲಿ ಹಿಂದೂ ಜನಸಂಖ್ಯೆಯು 1951ರಲ್ಲಿ ಶೇ. 13 ರಿಂದ ಇಂದು ಶೇ. 2ಕ್ಕಿಂತ ಕಡಿಮೆಯಾಗಿದೆ ಮತ್ತು ಬಾಂಗ್ಲಾದೇಶದಲ್ಲಿ ಶೇ. 22 ರಿಂದ ಶೇ. 8ಕ್ಕಿಂತ ಕೆಳಗೆ ಇಳಿದಿದೆ ಎಂದು ಅವರು ನೆರೆಯ ದೇಶಗಳಲ್ಲಿನ ಅಲ್ಪಸಂಖ್ಯಾತರ ಕುಸಿತವನ್ನು ಉಲ್ಲೇಖಿಸಿದರು. “ಭಾರತವು ಧರ್ಮಶಾಲೆಯಲ್ಲ” ಎಂದು ಹೇಳಿದ ಶಾ, ಅಕ್ರಮ ವಲಸಿಗರನ್ನು “ಪತ್ತೆ ಮಾಡಿ, ಅಳಿಸಿ, ಗಡಿಪಾರು ಮಾಡುವ” (Detect, Delete, and Deport) ಕಠಿಣ ನೀತಿಯನ್ನು ಸರ್ಕಾರ ಅನುಸರಿಸಲಿದೆ ಎಂದು ಸ್ಪಷ್ಟಪಡಿಸಿದರು.