ಮುಂಬೈ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದ್ದು, ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಅವರ ಪುತ್ರಿ ವಿಧಿ ಮುಖರ್ಜಿ ನ್ಯಾಯಾಲಯದಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ತನ್ನ ತಾಯಿ ಇಂದ್ರಾಣಿ ಬಳಿ ಪ್ರಕರಣದ ಪರ ವಾದಿಸಲು ಯಾವುದೇ ಹಣವಿಲ್ಲದಂತೆ ಮಾಡಲಾಗಿದೆ ಮತ್ತು ಅವರ ಮಲಸಹೋದರರು 7 ಕೋಟಿ ರೂಪಾಯಿ ನಗದು ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣಗಳನ್ನು ಕದ್ದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮಂಗಳವಾರ, ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜೆ.ಪಿ. ದಾರೇಕರ್ ಅವರ ಮುಂದೆ ಸಾಕ್ಷಿಯಾಗಿ ಹಾಜರಾದ ವಿಧಿ, ಸಿಬಿಐ ತನ್ನದೆಂದು ಹೇಳುತ್ತಿರುವ ಹೇಳಿಕೆಯನ್ನು ತಾನು ಎಂದಿಗೂ ನೀಡಿಲ್ಲ ಮತ್ತು ಆರೋಪಪಟ್ಟಿಯಲ್ಲಿರುವ ದಾಖಲೆಗಳು “ನಕಲಿ ಮತ್ತು ಸೃಷ್ಟಿತ” ಎಂದು ಹೇಳುವ ಮೂಲಕ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾರೆ.
ವಿಧಿ ಮುಖರ್ಜಿ ಹೇಳಿದ್ದೇನು?:
“ನನ್ನ ತಾಯಿಯ ಬಂಧನದ ನಂತರ, ಪೀಟರ್ ಮುಖರ್ಜಿ ಅವರ ಮಕ್ಕಳಾದ ರಾಹುಲ್ ಮತ್ತು ರಾಬಿನ್ ಮುಖರ್ಜಿ ಅವರು, ನನ್ನ ತಾಯಿಯ 7 ಕೋಟಿ ರೂಪಾಯಿಗೂ ಅಧಿಕ ಹಣ ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಪೂರ್ವಜರ ಆಭರಣಗಳನ್ನು ಕದ್ದಿದ್ದಾರೆ. ಈ ಕದ್ದ ಆಭರಣಗಳನ್ನು ಇಡಲು ಅವರು ಹೊಸ ಬ್ಯಾಂಕ್ ಲಾಕರ್ ತೆರೆದಿದ್ದಾರೆ,” ಎಂದು ವಿಧಿ ಆರೋಪಿಸಿದ್ದಾರೆ.
“ರಾಹುಲ್ ಮತ್ತು ರಾಬಿನ್‌ಗೆ ಹಣದ ಅವಶ್ಯಕತೆ ಇತ್ತು. ಒಂದು ವೇಳೆ ನನ್ನ ತಾಯಿ ಜೈಲಿನಿಂದ ಹೊರಬಂದರೆ, ಕದ್ದ ಹಣ ಮತ್ತು ಆಭರಣಗಳನ್ನು ವಾಪಸ್ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ, ಅವರು ನನ್ನ ತಾಯಿಯನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಸ್ಪಷ್ಟ ಉದ್ದೇಶ ಹೊಂದಿದ್ದರು,” ಎಂದು ವಿಧಿ ವಾದಿಸಿದ್ದಾರೆ.
“ಸಿಬಿಐ ಅಧಿಕಾರಿಗಳು ನನ್ನನ್ನು ಪ್ರಶ್ನಿಸಿದ್ದರು, ಆದರೆ ನಾನು ಯಾವುದೇ ಹೇಳಿಕೆಯನ್ನು ದಾಖಲಿಸಿಲ್ಲ. ಅವರು ನನ್ನಿಂದ ಖಾಲಿ ಹಾಳೆಗಳು ಸೇರಿದಂತೆ ಹಲವು ದಾಖಲೆಗಳಿಗೆ ಸಹಿ ಹಾಕಿಸಿಕೊಂಡರು. ಆರೋಪಪಟ್ಟಿಯಲ್ಲಿರುವ ಹೇಳಿಕೆ ನಕಲಿಯಾಗಿದ್ದು, ನನ್ನ ತಂದೆ-ತಾಯಿ (ಇಂದ್ರಾಣಿ ಮತ್ತು ಸಂಜೀವ್ ಖನ್ನಾ) ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಇದನ್ನು ಸೃಷ್ಟಿಸಲಾಗಿದೆ,” ಎಂದು ವಿಧಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಶೀನಾ ಬೋರಾಳನ್ನು ತನ್ನ ತಾಯಿಯ “ಸಹೋದರಿ” ಎಂದು ನನಗೆ ಪರಿಚಯಿಸಲಾಗಿತ್ತು. ಪೀಟರ್ ಮುಖರ್ಜಿ ಅವರ ಮಗ ರಾಹುಲ್, ಡ್ರಗ್ಸ್ ಸೇವನೆಗೆ ಇಳಿದ ನಂತರ ಮತ್ತು ಶೀನಾ ಕೂಡ ಅದರಲ್ಲಿ ಭಾಗಿಯಾದ ನಂತರ ಕುಟುಂಬದಲ್ಲಿ ಸಮಸ್ಯೆಗಳು ಉಲ್ಬಣಗೊಂಡವು ಎಂದು ವಿಧಿ ಹೇಳಿದ್ದಾರೆ.
2012ರ ಏಪ್ರಿಲ್‌ನಲ್ಲಿ ಶೀನಾ ಬೋರಾಳನ್ನು ಆಕೆಯ ತಾಯಿ ಇಂದ್ರಾಣಿ, ಅವರ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಚಾಲಕ ಶ್ಯಾಮವರ್ ರೈ ಸೇರಿ ಕಾರಿನಲ್ಲಿ ಕತ್ತು ಹಿಸುಕಿ ಕೊಂದಿದ್ದರು ಎಂದು ಆರೋಪಿಸಲಾಗಿದೆ. 2015ರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು.
ವಿಧಿ ಮುಖರ್ಜಿ ಅವರ ಈ ಹೊಸ ಹೇಳಿಕೆಗಳು ಪ್ರಕರಣದ ದಿಕ್ಕನ್ನೇ ಬದಲಿಸುವ ಸಾಧ್ಯತೆಯಿದ್ದು, ಅವರ ವಿಚಾರಣೆ ಇಂದೂ ಮುಂದುವರಿಯಲಿದೆ.



















