ನವದೆಹಲಿ: ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸಮೀಕ್ಷೆ “ಸ್ವಚ್ಛ ಸರ್ವೇಕ್ಷಣಾ 2024″ರ ಫಲಿತಾಂಶಗಳನ್ನು ಗುರುವಾರ ಪ್ರಕಟಿಸಲಾಗಿದ್ದು, ಸತತ ಎಂಟನೇ ಬಾರಿಗೆ ದೇಶದ ‘ಅತ್ಯಂತ ಸ್ವಚ್ಛ ನಗರ’ ಎಂಬ ಹೆಗ್ಗಳಿಕೆಗೆ ಇಂದೋರ್ ಪಾತ್ರವಾಗಿದೆ. ಇಂದೋರ್ ನಂತರದ ಸ್ಥಾನಗಳನ್ನು ಸೂರತ್ ಮತ್ತು ನವಿ ಮುಂಬೈ ನಗರಗಳು ಪಡೆದಿವೆ.
3-10 ಲಕ್ಷ ಜನಸಂಖ್ಯೆ ವಿಭಾಗದಲ್ಲಿ ನೋಯ್ಡಾ ಅತ್ಯಂತ ಸ್ವಚ್ಛ ನಗರವಾಗಿ ಹೊರಹೊಮ್ಮಿದೆ. ಈ ವಿಭಾಗದಲ್ಲಿ ಚಂಡೀಗಢ ಮತ್ತು ಮೈಸೂರು ನಂತರದ ಸ್ಥಾನಗಳಲ್ಲಿವೆ.
ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಜೇತ ನಗರಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಲಕ್ನೋದಲ್ಲಿ ಸ್ವಚ್ಛತಾ ಅಭಿಯಾನ
ಇದೇ ವೇಳೆ, ಜುಲೈ 10 ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ 74ನೇ ಜನ್ಮದಿನದ ಅಂಗವಾಗಿ ಉತ್ತರ ಪ್ರದೇಶದ ಲಕ್ನೋದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನವನ್ನು ನಡೆಸಲಾಗಿದೆ. ಲಕ್ನೋ ಮೇಯರ್ ಸುಷ್ಮಾ ಖಾರ್ವಾಲ್ ಅವರ ನೇತೃತ್ವದಲ್ಲಿ ನೈರ್ಮಲ್ಯ ಕಾರ್ಯಕರ್ತರು ಮತ್ತು ಸ್ಥಳೀಯರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
“ಇಂದು ಲಕ್ನೋದ ಜನಪ್ರಿಯ ಸಂಸದರು ಮತ್ತು ದೇಶದ ರಕ್ಷಣಾ ಸಚಿವರ ಜನ್ಮದಿನ. ಇಂದು ಲಕ್ನೋ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸುತ್ತಿದೆ. ಇದು ಲಕ್ನೋದ ಜನರ ಪರವಾಗಿ ಅವರಿಗೆ ನೀಡುವ ಕೊಡುಗೆ” ಎಂದು ಲಕ್ನೋ ಮೇಯರ್ ಸುಷ್ಮಾ ಖಾರ್ವಾಲ್ ತಿಳಿಸಿದ್ದಾರೆ. ಮಾಂಕಾಮೇಶ್ವರ ವಾರ್ಡ್‌ನ ಕೌನ್ಸಿಲರ್ ರಂಜಿತ್ ಸಿಂಗ್ ಮಾತನಾಡಿ, “ಮೇಯರ್ ಕರೆಗೆ ಓಗೊಟ್ಟು, ಲಕ್ನೋ ಮಹಾನಗರ ಪಾಲಿಕೆಯಾದ್ಯಂತದ ಕೌನ್ಸಿಲರ್‌ಗಳು ಇಂದು ತಮ್ಮ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ನಾವು ಬೆಳಗ್ಗೆ 6 ಗಂಟೆಯಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದೇವೆ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಅವರ ಜನ್ಮದಿನದಂದು ಈ ಸ್ವಚ್ಛತಾ ಅಭಿಯಾನವನ್ನು ಕಾಣಿಕೆಯಾಗಿ ನೀಡುತ್ತಿದ್ದೇವೆ” ಎಂದು ಹೇಳಿದ್ದಾರೆ.



















