ಪಾಕಿಸ್ತಾನ ವಿರುದ್ಧ ಅಧಿಕೃತವಾಗಿ ಯುದ್ಧ ಆರಂಭವಾದಂತಾಗಿದೆ. ಪಹಲ್ಗಾಮ್ ಹತ್ಯಾಕಾಂಡದ ಪ್ರತೀಕಾರಕ್ಕಾಗಿ ಆಪರೇಷನ್ ಸಿಂಧೂರ್ ಸಮರ ಸಾರಿರುವ ಭಾರತ ಪಾಕಿಸ್ತಾನದೊಳಗೆ ನುಗ್ಗಿ ಸಂಹಾರ ಕಾರ್ಯ ಶುರುಮಾಡಿದೆ. ಆದ್ರೆ ಈ ಯುದ್ಧದ ಕಾರ್ಮೋಡ ಯಾವೆಲ್ಲಾ ಕ್ಷೇತ್ರಗಳ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷ ಪೆಟ್ಟು ನೀಡುತ್ತೆ ಅನ್ನೋದನ್ನು ಅಂದಾಜಿಸಿದರೆ ಅಲ್ಲಿ ಸಾವಿರಾರು ಕೋಟಿಗಳ ನಷ್ಟದ ಲೆಕ್ಕ ಸಿಗುತ್ತಿದೆ. ಹೌದು, ಭಾರತದ ಕೆಲ ಕ್ಷೇತ್ರಗಳಂತು ನೇರವಾಗಿ ಯುದ್ಧದ ಹೊಡೆತಕ್ಕೆ ತತ್ತರಿಸಲಿವೆ.
ವಿಮಾನ ಯಾನ ಸಂಸ್ಥೆಗಳಿಗೆ ಲುಕ್ಸಾನು
ಭಾರತ-ಪಾಕ್ ನಡುವಿನ ಯುದ್ಧ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಕ್ಷೇತ್ರಕ್ಕೆ ನೇರ ಪೆಟ್ಟು ನೀಡುತ್ತಿದೆ. ಈಗಾಗಲೇ ಪಾಕಿಸ್ತಾನದ ದಾಳಿ ಭೀತಿಯಲ್ಲಿ ಭಾರತದ 24 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಇನ್ನೊಂದೆಡೆ ಪಾಕ್ ತನ್ನ ವಾಯು ಪ್ರದೇಶ ಬಳಕೆಗೆ ನಿರ್ಬಂಧ ಹೇರಿದೆ. ಪರಿಣಾಮ ವಿದೇಶಿ ವಿಮಾನ ಸಂಚಾರ ಮಾರ್ಗ ಮತ್ತಷ್ಟು ಸುತ್ತುವರಿದು ಪರ್ಯಾಯ ಮಾರ್ಗದಲ್ಲಿ ಸಾಗಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಅಷ್ಟೇ ಅಲ್ಲಾ ಈ ಎಲ್ಲದರಿಂದ ವಿಮಾನ ಯಾನ ಕ್ಷೇತ್ರ 1000ರಿಂದ 1500 ಕೋಟಿವರೆಗೂ ನಷ್ಟವನ್ನು ಅನುಭವಿಸುತ್ತಿದೆ.
ಭಾರತೀಯ ಷೇರು ಮಾರುಕಟ್ಟೆಯಲ್ಲಿ ತಲ್ಲಣ
ಯುದ್ಧದ ಹೊಡೆತಕ್ಕೆ ಭಾರತದ ಷೇರುಪೇಟೆಯೂ ತಲ್ಲಣಕ್ಕೊಳಗಾಗಿದೆ. ಯಾವುದೇ ದೇಶವಿರಲಿ ಯುದ್ಧ ಆವರಿಸಿದರೆ ಹೂಡಿಕೆದಾರರು ಬಂಡವಾಳ ಹಿಂತೆಗೆತಕ್ಕೆ ದಿಢೀರ್ ಮುಂದಾಗುತ್ತಾರೆ. ಪರಿಣಾಮ ಷೇರು ಪೇಟೆಯಲ್ಲಿ ಕರಡಿ ಕುಣಿತ ಆರಂಭವಾಗುತ್ತೆ. ಭಾರತದ ಷೇರುಪೇಟೆ ಮೇಲೂ ಆಪರೇಷನ್ ಸಿಂಧೂರಿ ದೊಡ್ಡ ಪರಿಣಾಮ ಬೀರಿದೆ. ಇತ್ತೀಚೆಗಷ್ಟೇ 80 ಸಾವಿರದ ಗಡಿದಾಟಿ ನುಗ್ಗಿದ್ದ ಸೆನ್ಸೆಕ್ಸ್ ಇವತ್ತು 746 ಅಂಕಗಳ ಕುಸಿತ ಕಾಣುವುದರೊಂದಿಗೆ 79.588 ಅಂಕಗಳಲ್ಲಿ ವಹಿವಾಟು ನಡೆಸಿದೆ. ನಿಫ್ಟಿ ಕೂಡಾ 239 ಅಂಕ ಕುಸಿದು 24035 ಅಂಕಗಳಲ್ಲಿ ನಿಂತಿದೆ. ಯುದ್ಧ ಮುಂದುವರಿಯೋ ಮುನ್ಸೂಚನೆ ಸಿಕ್ಕರೆ ಕುಸಿತ ಮತ್ತಷ್ಟು ದೊಡ್ಡ ಮಟ್ಟಕ್ಕೆ ಕುಸಿತದ ಹಾದಿ ಹಿಡಿಯುವ ಸಾಧ್ಯತೆಗಳಿವೆ. ಹೀಗಾಗಿ ಭಾರತದ ಆರ್ಥಿಕತೆಗೂ ದೊಡ್ಡ ಪೆಟ್ಟು ಬೀಳಲಿದೆ.
ಸಿನಿಮಾ ಉದ್ಯಮದಲ್ಲಿ ಅಲ್ಲೋಲ ಕಲ್ಲೋಲ
ಮನೋರಂಜನಾ ಕ್ಷೇತ್ರ ದೇಶದ ಆರ್ಥಿಕ ದೊಡ್ಡ ಪ್ರಮಾಣದ ಕೊಡುಗೆ ನೀಡುತ್ತಿದೆ. ವಾರ್ಷಿಕ ಸಾವಿರಾರು ಕೋಟಿಗಳ ವಹಿವಾಟಿಗೆ ಸಾಕ್ಷಿಯಾಗುವ ಕ್ಷೇತ್ರ, ರಾಜ್ಯವಾರು ಕೂಡಾ ಹಂಚಿಕೆಯಾಗಿದೆ. ಮುಂಬೈ ಕೇಂದ್ರಿತ ಹಿಂದಿ ಭಾಷೆಯ ಸಿನಿಮಾಗಳ ತವರು ಬಾಲಿವುಡ್ ಯುದ್ಧದ ಹೊಡೆತಕ್ಕೆ ಜರ್ಜರಿತವಾಗುವ ಲಕ್ಷಣಗಳು ಗೋಚರಿಸುತ್ತಿವೆ. 2023ರ ಬಾಲಿವುಡ್ ಗಣಿತವನ್ನು ಗಮನಿಸಿದ್ರೆ ಅಂದಾಜು 12.226 ಕೋಟಿಗಳ ವಹಿವಾಟಿಗೆ ಸಾಕ್ಷಿಯಾಗಿತ್ತು. ಇದೇ 2024ರಲ್ಲಿ ಈ ಆದಾಯ ಕುಸಿದು 11853 ಕೋಟಿ ಬ್ಯುಸಿನೆಸ್ ಮಾಡಿತ್ತು. ಇದೇ ಲೆಕ್ಕವನ್ನು ಅಂದಾಜಿಸಿದರೆ, ಈ ವರ್ಷ ಬಾಲಿವುಡ್ 16 ಸಾವಿರ ಕೋಟಿಗೂ ಮಿಕ್ಕ ಲೆಕ್ಕವನ್ನು ದಾಟಬೇಕಿತ್ತು. ಆದರೆ, ಯುದ್ಧದ ಭೀತಿಯಲ್ಲಿ ಹಲವು ಸಿನಿಮಾಗಳ ಬಿಡುಗಡೆ ಮುಂದೂಡಿಕೆಯಾದ್ರೆ, ಕೆಲ ಚಿತ್ರಗಳ ಚಿತ್ರೀಕರರಣ ಮುಂದೂಡಲ್ಪಡಬಹುದು. ಹೀಗಾಗಿ ದೊಡ್ಡ ಮಟ್ಟದ ಆದಾಯದ ಪಾಲು ಮಂಕಾಗಬಹುದು.
ಕ್ರೀಡಾ ವಲಯಯಕ್ಕೆ ಮರ್ಮಾಘಾತ
ಹಾಗೆ ನೋಡಿದರೆ, ಭಾರತದಲ್ಲಿ ಕ್ರಿಕೆಟ್ ಅನ್ನೋದು ಆರಾಧನೆ ಇದ್ದ ಹಾಗೆ. ಅದ್ರಲ್ಲೂ ಐಪಿಎಲ್ ಎನ್ನುವುದು ಯುವ ಪೀಳಿಗೆ ಪಾಲಿನ ಸರ್ವಸ್ವವೇ ಆಗಿದೆ. ಯುದ್ಧದ ಹಿನ್ನೆಲೆಯಲ್ಲಿ 2025ನೇ ಸಾಲಿನ ಐಪಿಎಲ್ ಪಂದ್ಯಾವಳಿಯನ್ನೀಗ ರದ್ದುಗೊಳಿಸಲಾಗಿದೆ. ನಿಜಕ್ಕೂ ಇದು ದೊಡ್ಡ ಮಟ್ಟದ ಆದಾಯದ ಮೂಲವೊಂದಕ್ಕೆ ಪೆಟ್ಟುಬಿದ್ದಂತಾಗಿದೆ. ಕಳೆದ ವರ್ಷ ಬಿಸಿಸಿಐನಿಂದ ಐಪಿಎಲ್ ಫ್ರಾಂಚೈಸಿ ತಂಡಗಳಿಗೆ ಸಂದಾಯವಾದ ಮೊತ್ತವೇ 4670 ಕೋಟಿ ಮೀರಿದೆ. ಅಂದ್ರೆ ಇದರಲ್ಲಿ ಬಿಸಿಸಿಐ ಲಾಭಾಂಶವನ್ನ ಬಿಟ್ಟೇ ಈ ಮಟ್ಟದ ಲಾಭವಿದ್ರೆ ಇನ್ನು ಪ್ರತಿ ತಂಡಗಳು ಗಳಿಸೋ ಹಣದ ಗಣಿತವೇ ಬೇರೆಯದ್ದು. ಹಾಗೆ ನೋಡಿದ್ರೆ ಕಳೆದ ವರ್ಷ ಮುಂಬೈ ತಂಡವೊಂದೇ 737 ಕೋಟಿಗಳ ಆದಾಯವನ್ನು ಗಳಿಸಿತ್ತು. ಇನ್ನು ಎರಡನೇ ಸ್ಥಾನದಲ್ಲಿದ್ದ ಚೆನ್ನೈ 676 ಕೋಟಿಗಳನ್ನು ಗಳಿಸಿತ್ತು. ಬೆಂಗಳೂರಿನ ಆರ್ ಸಿಬಿ 650 ಕೋಟಿ ಆದಾಯ ಮುಟ್ಟಿತ್ತು. ಹಾಗಿದ್ರೆ ಈ ಲೆಕ್ಕ ಈ ಬಾರಿ ಮತ್ತಷ್ಟು ಏರಿಕೆಯ ಉಮೇದಿನಲ್ಲಿತ್ತು. ಆದ್ರೀಗ ಅದಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಇದರೊಟ್ಟಿಗೆ ನೇರ ಪ್ರಸಾರದ ಹಕ್ಕು ಪಡೆದಿದ್ದ ರಿಲಯನ್ಸ್ ಒಡೆತನದ ಜಿಯೋ ಹಾಟ್ ಸ್ಟಾರ್ ಗೂ ದೊಡ್ಡ ಪೆಟ್ಟು ಬಿದ್ದಿದ್ದು, ಜಾಹೀರಾತು ಲೋಕವೂ ಅಪಾರ ನಷ್ಟ ನೋಡುವಂತಾಗಿದೆ.